Powered By Blogger

Tuesday, August 3, 2021

ಲಲಿತಾ ಸಿದ್ದಬಸವಯ್ಯ - " ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ " { ಭಾವನಾ ಹಿರೇಮಠ }Lalta Siddabasavayya / Bhavana Hiremath /

ಪ್ರಿಯ ಭುವನಾ, ಪ್ರೀತಿಯಿಂದ ಸಂಕಲನ ಕಳುಹಿಸಿದ್ದೀರಿ. ಧನ್ಯವಾದಗಳು. ನೀವು ಒಬ್ಬ ಭರವಸೆಯ ಕವಿ ಎಂಬುದನ್ನು ಎರಡನೆಯ ಸಲ ಸಾಬೀತು ಮಾಡಿದ್ದೀರಿ. ವಿಶೇಷವೆಂದರೆ ಮೊದಲ "ಟ್ರಯಲ್......." ಸಂಕಲನದಿಂದ ಈ "ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ" ಸಂಕಲನದವರೆಗೆ ನೀವೇನು ನಡೆದಿರೋ ಆ ನಡಿಗೆ ಫಲ ಕೊಟ್ಟಿದೆ. ಉದಾಹರಣೆಗೆ, ಎರಡನೆಯದರಲ್ಲಿ ನೀವು ಮತ್ತಷ್ಟು ಸ್ಪಷ್ಟರಾಗಿದ್ದೀರಿ ಮತ್ತು ಕವಿತೆಯೊಂದನ್ನು ನಿಷ್ಚಿತ ವಸ್ತುವಿನ ಪ್ರತಿಪಾದನೆಗೆ ಹೇಗೆ ಹೇಗೆ ಕವಿ ಬಾಗಿಸಬಹುದೋ ಆ ಎಲ್ಲ ಮಾರ್ಗಗಳಲ್ಲೂ ಪ್ರಯತ್ನಿಸಿದ್ದೀರಿ. ವೈಯಕ್ತಿಕ ಅನುಭವಗಳು ಕವಿತೆಯಾಗುವುದು ಕವಿಯ ಸ್ವಗತಗಳಾಗಿ ಬಿಟ್ಟರೆ ಓದುಗ ಕಕ್ಕಾಬಿಕ್ಕಿಯಾಗುವನು. ಮೊದಲ ಸಂಕಲನದಲ್ಲಿ ಆ ತೊಡಕು ಹೆಚ್ಚಾಗಿತ್ತು. ಈ ಸಂಕಲನ ಆ ಸ್ವಗತಗಳನ್ನು ಮೇಲುಹಂತಕ್ಕೇರಿಸಿ ಕವಿತೆ ಓದುಗ ಸ್ನೇಹಿಯಾಗುವಂತೆ ಮಾಡಿದೆ. ಅವು ಇನ್ನೂ ಸಂಪೂರ್ಣವಾಗಿ ಸ್ವಗತಗಳಿಂದ ಮೇಲೇರುವ ಮಾರ್ಗವನ್ನು ನೀವು ಕಂಡುಹಿಡಿದುಕೊಳ್ಳಬಲ್ಲರಿ. ನೀವು ಸಂಭಾಷಣೆ ನಡೆಸುವುದು ನಿಮ್ಮೊಂದಿಗೇ, ಲೋಕದೊಂದಿಗಲ್ಲ. ಕವಿಗಳು ಎರಡು ಬಗೆ, ತಮ್ಮೊಂದಿಗೇ ಮಾತನಾಡಿಕೊಳ್ಳುವ ಅಂತರ್ಮುಖದವರು.ಲೋಕದೊಂದಿಗೆ ನೇರ ಸಂವಾದಕ್ಕೆ ಇಳಿಯುವ ಬಹಿರ್ಮುಖದವರು. ನೀವು ಮೊದಲ ಪೈಕಿ. ಈ ಎರಡೂ ಬಗೆಗೆ ಕನ್ನಡದಲ್ಲಿ ಅತೀ ಹಳೆಯ ಉದಾಹರಣೆಗಳಾಗಿ ಪಂಪ ಮತ್ತು ನಾರಣಪ್ಪನನ್ನು ಕೊಡಬಹುದೇನೋ! ಪಂಪ ಜನಕ್ಕೊಪ್ಪಿಸುವುದಕ್ಕಿಂತ ತನ್ನ ಒಳ ಒಪ್ಪಿಗೆಗೆ ಮಹತ್ವ ಕೊಡುವವನು. ನಾರಣಪ್ಪ ಸಿಕ್ಕ ಅವಕಾಶದಲ್ಲೆಲ್ಲ ಲೋಕವನ್ನು ಒಪ್ಪಿಸಲು ತವಕಿಸುವವನು. ಅದಕ್ಕೇ ಅವನಿಗೆ ಹೆಚ್ಚು ಮಾತು ಬೇಕು. ಒಂದೇ ವಿಷಯವನ್ನು ಪರಿಪರಿಯಾಗಿ ವರ್ಣಿಸಬೇಕು. ನನ್ನಂಥವರು ಕಾವ್ಯಮಾರ್ಗದಲ್ಲಿ ನಾರಣಪ್ಪನ ಉಪಾಸಕರು. ನೀವು, ಜ.ನಾ.ತೇಜಶ್ರೀ ಮುಂತಾದವರು ಪಂಪ ಮಾರ್ಗಸ್ಥರು. ಹಾಗಾಗಿ ಪದಗಳ ಖರ್ಚು ನಿಮಗೆ ಕಡಿಮೆ. ಎರಡೂ ಮಾರ್ಗವನ್ನು ಕನ್ನಡದಲ್ಲಿ ನಾವು ಕಾಣಬಹುದು. ಒಬ್ಬ ಕವಿಯೇ ಎರಡೂ ಮಾರ್ಗದಲ್ಲಿ ನಡೆಯುವ ಸಾಧ್ಯತೆಯನ್ನೂ ನಾನು ಕಂಡಿದ್ದೇನೆ. ಈ ಮೂರು ಬಗೆಯ ಉದಾಹರಣೆಗೆ ಎಷ್ಟೊಂದು ಹೊಸಬರ ಹೆಸರುಗಳೇ ಮನದಲ್ಲಿ ಬರುತಲಿವೆ. ನಿಮ್ಮ ಭಾಷೆ ಈ ಸಂಕಲನದಲ್ಲಿ ಐನೋರ ಮನೆಯ ಹುಡುಗಿಯೊಬ್ಬಳು ಅಪ್ರಯತ್ನವಾಗಿ ಕೇಳುವ ಪರಂಪರೆಯ ನುಡಿಗಟ್ಟುಗಳನ್ನು ಚೆನ್ನಾಗಿ ಬಳಸಿಕೊಂಡಿದೆ. ಬಹುಶಃ ಕೊಂಚ ನಿಗವಿಟ್ಟು ಬರೆದರೆ ಆಧುನಿಕ ವಚನಗಳನ್ನೋ ತತ್ವಪದಗಳನ್ನೋ ನೀವು ಸಮರ್ಥವಾಗಿ ಬರೆಯಬಲ್ಲಿರಿ. ಇದಕ್ಕೆ ತದ್ವಿರುದ್ಧವಾಗಿ ಮುಲಾಜಿಲ್ಲದೆ ಇಂಗ್ಲಿಷ್ ನುಡಿಗಟ್ಟನ್ನು ಬಳಸಿ ಕನ್ನಡದ ತಂತಿಯಲ್ಲಿ ಇಂಗ್ಲಿಷ್ ಸುತ್ತುವ ಅಕ್ಕಸಾಲೆಯ ಸೂಕ್ಷ್ಮ ಕೆಲಸವನ್ನೂ ಸಮರ್ಪಕವಾಗಿ ಮಾಡಿದ್ದೀರಿ. ಇಷ್ಟಾದರೂ ನಿಮ್ಮ ಪ್ರಾದೇಶಿಕ ಮುದ್ರೆಹೊತ್ತ ಭಾಷೆಯನ್ನು ಬಳಸುವುದಿಲ್ಲವೆಂಬ ನನ್ನ ಹಳೆಯ ಆಕ್ಷೇಪವಿದ್ದೇ ಇದೆ. ಈ ಸಂಕಲನದ ಮೂಲಸ್ರೋತ ನನಗನಿಸಿದ ಹಾಗೆ ವಿಷಾದ ಮತ್ತು ವಿಷಾದ ಲೇಪಿತ ವ್ಯಂಗ್ಯ.... ಎಲ್ಲ ಕವನಗಳನ್ನು ಅದು ಒಂದಿಲ್ಲೊಂದು ಬಗೆಯಾಗಿ ನೆತ್ತಿಯನ್ನಾಕ್ರಮಿಸಿದೆ. ಸಂಕಲನದ ಬಹುತೇಕ ಕವನಗಳು ನನಗಿಷ್ಟವಾದವು. ಹೆಸರಿಸ ಹೋದರೆ ಅದೇ ಯಾದಿಯಾಗುತ್ತದೆ. ಕಾವ್ಯ ನಿಮಗೊಲಿದಿದೆ. ನಿಮ್ಮ ಮುಂದಿನ ನಡಿಗೆಗೆ ಶುಭಹಾರೈಕೆಗಳು. ಲಲಿತಾ ಸಿದ್ಧಬಸವಯ್ಯ ಜುಲೈ 31 2021, ಬೆಂಗಳೂರು. 8 Comments ವೀರೂ ವಸಂತ ಅಭಿನಂದನೆಗಳು

No comments:

Post a Comment