Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Sunday, August 15, 2021
ಗಿರಿಜಾ ಶಾಸ್ತ್ರಿ - ಡಿ. ಆರ್. ನಾಗರಾಜ್ ಎಂಬ ರೂಪಕ/ D. R. NAGARAJ
ಡಿ.ಆರ್. ಎನ್ ಎಂಬ ರೂಪಕ
ಮೆಷ್ಟ್ರರ ಹುಟ್ಟು ಹಬ್ಬದ ನೆನಪಿಗೆ
1979 ಜೂನ್ ಜುಲೈ ತಿಂಗಳು. ನಾವು ಕನ್ನಡ ಎಂ.ಎ.ಗೆ ಸೇರಿದ ಹೊಸತು. ಒಂದು ದಿನ ಉದ್ದನೆಯ, ಗಡ್ಡ ಧಾರಿಯಾದ ಶ್ಯಾಮಲವರ್ಣದ ವ್ಯಕ್ತಿಯೊಬ್ಬರು ತರಗತಿಗೆ ಬಂದರು. ಕನ್ನಡಕದ ಹಿಂದೆ ಉಜ್ವಲವಾಗಿ ಹೊಳೆಯುವ ಅಗಲ ಕಣ್ಣುಗಳು. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಪರಿಚಯಾತ್ಮಕ ತರಗತಿ ಎಂದೆನಿಸುತ್ತದೆ. ತಲೆಯೊಳಗೆ ಏನೂ ಹೊಗಲಿಲ್ಲ. ಕನ್ನಡ ಮಾತನಾಡುತ್ತಿದ್ದಾರೆ ಎಂದೇ ಎನಿಸಲಿಲ್ಲ. ವಿಶಿಷ್ಟ ಶಬ್ದಾರ್ಥಕೋಶ, ವಿಶಿಷ್ಟ ಐಡಿಯಾಲಜಿ ತರಗತಿಯಿಂದ ಹೊರಗೆ ಬಂದಾಗ ಎಲ್ಲವೂ ಅಯೋಮಯ.
ನಾಲ್ಕೂ ಬದಿಗೆ ಸುತ್ತಲೂ ತರಗತಿಗಳು, ಅಧ್ಯಾಪಕರ ಕೊಠಡಿಗಳು. ಮಧ್ಯೆ ಕುವೆಂಪು ಅವರ ಕುಪ್ಪಳಿಯ ಮನೆಯಲ್ಲಿರುವ ಹಾಗೆ ಅಗಲ ತೊಟ್ಟಿ. ಅಲ್ಲಿ ಹುಲ್ಲು ಬೆಳೆದಿತ್ತು. ಮೂಲೆಗಳಲ್ಲಿ ಅಲ್ಲಲ್ಲಿ ಶಾಸನ ಕಲ್ಲುಗಳನ್ನು ನೆಡಲಾಗಿತ್ತು.
ತರಗತಿಯ ಯಾವುದೋ ಒಂದು ಕೋಣೆಯಿಂದ ಹೊರಬಂದು, ಆ ಕಟ್ಟೆ ಇಳಿದು ಮ್ಯಾಕ್ಸಿ ತೊಟ್ಟ ಹುಡುಗಿಯೊಬ್ಬಳು ನಮ್ಮ ಬಳಿಗೆ ಧಾವಿಸಿ ಬಂದು "ಹೇಗಿತ್ರೇ ಡಿ.ಆರ್.ಎನ್ ಕ್ಲಾಸು? "ಎಂದಳು.
ಹೀಗೆ ಕೇಳಿದ ಹುಡುಗಿ ಬೇರಾರು ಅಲ್ಲ ನಮ್ಮ ಸೀನಿಯರ್ ತರಗತಿಯಲ್ಲಿದ್ದ ಕಮಲಾ- ಇಂದಿನ ಈ ಫೇಸ್ ಬುಕ್ಕಿನ ಹೀರೋಯಿನ್ ಕಮಲಾ ಮೇಟಿಕುರ್ಕಿ.
"ಕಲ್ಕಿ ಕಲ್ಕಿ ಎನ್ನುತ ಚೀರಿ ಕನಸೊಡೆದೆದ್ದೆ ಇನ್ನೆಲ್ಲಿಯ ನಿದ್ದೆ".....
"ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು......ಪೋಲೀಸರ ದೊಣ್ಣೆಗಳು ಏಜಂಟರ ಕತ್ತಿಗಳು....." ಡಿ.ಆರ್ ಎನ್ ಅವರು ನಮಗೆ ಕುವೆಂಪು ಅವರ ಕವಿತೆಗಳ ಸಂಕಲನ 'ಕೋಗಿಲೆ ಮತ್ತು ಸೋವಿಯತ್ ರಷ್ಯಾ' ಪಾಠಮಾಡುತ್ತಿದ್ದರು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿದ್ರೋಹದ ಸಾತತ್ಯದ ರೂಪವನ್ನು ಬಯಲಿಗೆಳೆಯುತ್ತಿದ್ದರೆನಿಸುತ್ತದೆ. ನನಗೋ ಕನ್ನಡ ಸಾಹಿತ್ಯದ ಅ.ಬ.ಕ. ಗೊತ್ತಿರಲಿಲ್ಲ. ಬಿ.ಎ. ತರಗತಿಯಲ್ಲಿ ಐಚ್ಛಿಕ ವಿಷಯವಾಗಿ ಮಾತ್ರ ಕನ್ನಡ ಸಾಹಿತ್ಯವನ್ನು ಓದಿದ್ದೆ. ಕುಮಾರವ್ಯಾಸ, ಭಾಸನ ನಾಟಕಗಳು, ನವ್ಯ ವಿಮರ್ಶೆ ( ಗಿರಡ್ಡಿ ಗೋವಿಂದರಾಜ), "ಜೈಸಿದನಾಯ್ಕ" ಮುಂತಾದ ಪುಸ್ತಕಗಳನ್ನು ಪರೀಕ್ಷೆಗಾಗಿ ಓದಿದ್ದೆನೇ ಹೊರತು ನನಗೆ ನಿಜವಾಗಿ ಕನ್ನಡ ಸಾಹಿತ್ಯದ ಬಗ್ಗೆ ಗಂಭೀರವಾದ ಆಸಕ್ತಿ ಇರಲಿಲ್ಲ. ಆದ್ದರಿಂದಲೇ ಕುವೆಂಪುವನ್ನೂ, ಸಿದ್ದಲಿಂಗಯ್ಯನವರನ್ನು ಸೇರಿಸಿಯೇ ಓದಿಕೊಂಡುಬಿಟ್ಟಿದ್ದೆ. ನವೋದಯ, ನವ್ಯ ಗೊತ್ತಿರಲಿಲ್ಲ. ಬಂಡಾಯವಂತೂ ಮೊದಲೇ ಗೊತ್ತಿರಲಿಲ್ಲ. ಯಾಕೆಂದರೆ ಬಂಡಾಯ ಆಗ ತಾನೇ ಕಣ್ತೆರೆಯುತಿತ್ತು.
'ಹೋರಾಟದ ಸಾಗರದೊಳ'ಕ್ಕೆ ನಮ್ಮನ್ನು ಅನಾಮತ್ತು ತಳ್ಳಿಬಿಟ್ಟವರಲ್ಲಿ ಡಿ.ಆರ್.ಎನ್ ಜೊತೆಗೆ, ಸಿದ್ಧಲಿಂಗಯ್ಯ, ಕಾಳೇಗೌಡ ನಾಗವಾರ, ಬರಗೂರು ರಾಮಚಂದ್ರಪ್ಪ, ಮುಂತಾದ ಗುರುಗಳಿದ್ದರು. ಪಕ್ಕದ ಇತಿಹಾಸ ವಿಭಾಗದಿಂದ ಚಂದ್ರಶೇಖರ್, ಹೊರಗಿನಿಂದ ಸಿ.ಜಿ.ಕೃಷ್ಣ ಸ್ವಾಮಿ ಮುಂತಾದವರು ಆಗಾಗ್ಗೆ ವಿಭಾಗಕ್ಕೆ ಬರುತ್ತಿದ್ದರು. ಡಿ ಆರ್‌ಎನ್ ಎಂದರೆ ಈ ಎಲ್ಲಾ ಪಟಾಲಂನ್ನು ಜೊತೆಗೇ ಸುತ್ತಿಕೊಂಡು ತಿರುಗುವ ಸೂರ್ಯನ ಹಾಗಿದ್ದರು. ನಾವು ಕೂಡ ಗಿರಗಿರನೆ ಸುತ್ತುತ್ತಿದ್ದೆವು.
ನಾನು ಇಂಗ್ಲಿಷ್ ಎಂ.ಎ. ಮಾಡುವಾಗ ಓದಿದ ಇಂಗ್ಲಿಷ್ ಸಾಹಿತ್ಯಕ್ಕಿಂತ ಕನ್ನಡ ಎಂ.ಎ. ಕಲಿಯುವಾಗ ಓದಿದ ಇಂಗ್ಲಿಷ್ ಸಾಹಿತ್ಯವೇ ಹೆಚ್ಚು. ಕನ್ನಡ ಸಾಹಿತ್ಯದ ನೆಪದಲ್ಲಿ ಜಾಗತಿಕ ಸಾಹಿತ್ಯದ ಪರಿಚಯವಾದದ್ದು ಕನ್ನಡ ಅಧ್ಯಯನ ಕೇಂದ್ರದಲ್ಲೇ.
"ಸ್ನಾನ ಮಾಡಿಕೊಂಡು ಬಂದ ಅನ್ನಾ ತನ್ನ ಕೂದಲನ್ನು ಒಣಗಿಸಿಕೊಳ್ಳುತ್ತಿದ್ದಾಗ ಅವಳ ಕೈಬೆರಳುಗಳ ಸೌಂದರ್ಯವನ್ನು ನಿಮಗ್ನವಾಗಿ ವರ್ಣಿಸುವುದನ್ನು ನೋಡಿದರೆ, ಅನ್ನಾಳ ನಿಜವಾದ ಪ್ರೇಮಿ ವ್ರೋನ್ಸ್ ಕಿ ಅಲ್ಲ, ಅದು ಟಾಲ್ ಸ್ಟಾಯೇ" !
ಡಿ.ಆರ್ ಎನ್ ಅವರು ಮಲೆಗಳಲ್ಲಿ ಮದುಮಗಳು ಪಾಠಮಾಡುತ್ತಿದ್ದಾಗ ಅವರು ಟಾಲ್ ಸ್ಟಾಯ್ ಬಗ್ಗೆ ಹೇಳುತ್ತಿದ್ದಾರೋ ಇಲ್ಲ ಕುವೆಂಪು ಬಗ್ಗೆ ಹೇಳುತ್ತಿದ್ದಾರೋ? ಕನ್ನಡ ಸಾಹಿತ್ಯದ ಪ್ರಾಥಮಿಕ ಶಾಲೆಯಲ್ಲಿದ್ದ ನನಗೆ ಅನುಮಾನಬರುತ್ತಿತ್ತು. ಸಾಂಸ್ಕೃತಿಕ ಸಮಾನಾಂತರತೆ ಎಂದರೆ ಏನೆಂಬುದು ತಲೆಗೆ ಹೊಗುತ್ತಿರಲಿಲ್ಲ. ಅವರು ತೀವ್ರವಾಗಿ ವ್ಯಾಖ್ಯಾನಿಸುತ್ತಿದ್ದ ಟ್ಯಾಗೋರ್ ಅವರ' Later poems' ಅಂತೂ ನನಗೆ ಕಬ್ಬಿಣದ ಕಡಲೆಯೇ ಆಗಿತ್ತು. "ಮನುಷ್ಯ ಕೆ ರೂಪ್, ನನ್ನಜ್ಜನಿಗೊಂದು ಆನೆ ಇತ್ತು, ಪಾತುಮ್ಮಳ ಆಡು ಮತ್ತು ಬಾಲ್ಯಕಾಲ ಸಖಿ, ಸಾಹಿಬ್ ಬೀಬಿ ಔರ್ ಗುಲಾಮ್ , ಏಣಿ ಮೆಟ್ಟಿಲುಗಳು" ಹೀಗೆ ನಮಗೆ ಅರೆದು ಕುಡಿಸಿದ ಇನ್ನೂ ಎಷ್ಟೋ ಪಠ್ಯಗಳು ಈಗ ನೆನಪಿಗೆ ಬಾರವು.
ಒಮ್ಮೊಮ್ಮೆ ಅವರು ತಮ್ಮ ಹಾಸ್ಟೆಲ್ ರೂಮಿನಲ್ಲೋ, ಸೆಂಟ್ರಲ್ ಕಾಲೇಜಿನ ಮರದಡಿಯಲ್ಲೋ ನಮಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಹಾಸ್ಟೆಲ್ ರೂಮಿನಲ್ಲಿ ಇದ್ದದ್ದು ಒಂದು ಮಂಚ ಮತ್ತು ಒಂದ.ಕುರ್ಚಿ. ಮಂಚದ ಮೇಲೆ ಹುಡುಗರೆಲ್ಲಾ ಕುಳಿತುಕಡೊಂಡು ಬಿಡುತ್ತಿದ್ದರು. ನಾವು ಹುಡುಗಿಯರು ನೆಲದ ಮೇಲೆ ವಿಧೇಯವಾಗಿ ಕುಳಿತುಕೊಳ್ಳುತ್ತಿದ್ದೆವು. ಮೇಷ್ಟ್ರ ಗಮನ ಎಷ್ಟು ಸೂಕ್ಷ್ಮವಾಗಿ ಇರುತ್ತಿತ್ತೆಂದರೆ "ಮೇಲೆ ಕೂತ್ಕೋಳ್ಳದನ್ನ ಕಲಿಬೇಕ್ರೀ" ಎಂದು ಹೇಳುತ್ತಿದ್ದರು. ಇನ್ನೊಮ್ಮೆ ಅವರ ಮನೆಗೆ ಹೋದಾಗ "ರೇಷ್ಮೆ ಸೀರೆ ಉಡುವುದನ್ನು ನಿರಾಕರಿಸಬೇಕ್ರಿ" ಎಂದಿದ್ದರು. ಹುಡುಗಿಯರು ಸರಳವಾಗಿರುವುದನ್ನು, ಸಬಲವಾಗಿರಬೇಕೆನ್ನುವ ಪಾಠ, ನಮಗೆ ಪಠ್ಯವಲ್ಲದೇ, ತರಗತಿಯ ಹೊರಗೆ ಅವರ ಜೊತೆಗೆ ನಡೆಸುವ ಮಾತುಕತೆಗಳ ಮೂಲಕವೂ ದೊರಕುತ್ತಿತ್ತು.
ನಾನು ಬಿ.ಎ. ಓದುವಾಗಲೇ ಸನಾತನ ಧರ್ಮ, ಪಾವಿತ್ರ್ಯ ಅಲೌಕಿಕ ಸತ್ಯ ಹೀಗೆ ಏನೇನೋ ಅಸಂಬದ್ಧ ಪ್ರಲಾಪಗಳನ್ನು ಒಂದು ನೋಟ್ ಬುಕ್ಕಿನಲ್ಲಿ ಬರೆದಿದ್ದೆ. ಅವುಗಳನ್ನು ಕವಿತೆಗಳೆಂದು ನನಗೆ ನಾನೇ ಕರೆದುಕೊಂಡುಬಿಟ್ಟಿದ್ದೆ. ಒಮ್ಮೆ ಡಿ.ಆರ್.ಎನ್ ಅವರ ಕೈಯಲ್ಲಿ ಆ ನೋಟ್ ಪುಸ್ತಕ ವನ್ನಿಟ್ಟು ಅವರ ಅಭಿಪ್ರಾಯ ಕೇಳಿದ್ದೆ.
ಸ್ವಲ್ಪ ದಿನಗಳಾದವು ಮೇಷ್ಟ್ರು ಸಿಕ್ಕಾಗಲೆಲ್ಲಾ ನನ್ನ ಕವಿತೆಗಳನ್ನು ಹೊಗಳಿಯಾರೆಂಬ ಆಸೆ. ಕಾಯುತ್ತಿದ್ದೆ. ನನಗೆ ಯಾವತ್ತೂ ರಿಜೆಕ್ಟ್ ಆಗುವ ಭಯ ಒಳಗೊಳಗೇ ಕಾಡುತ್ತಿದ್ದರೂ ಭಂಡ ಧೈರ್ಯ ಮಾಡಿ ನಾಲ್ಕೈದು ಬಾರಿ 'ಕವಿತೆಗಳ' ಬಗ್ಗೆ ಕೇಳಿದ್ದೆ. ಕೊನೆಗೆ ಒಮ್ಮೆ ಕರ್ನಾಟಕಾನ ಗ್ರಂಥಾಲಯದ ಮೇಲೆ ಭೂತಬಂಗಲೆಯಂತಿದ್ದ ಅವರ ಕೋಣೆಯೊಳಗೆ ನುಗ್ಗಿ ಬಿಟ್ಟೆ. ಅವರ ಎದುರಿನ ಕುರ್ಚಿಯಲ್ಲಿ ಕೂರಲು ಹೇಳಿದರು. ಬೇರೆಯವರ ಕೆಲವು ಸಶಕ್ತ ಕವಿತೆಗಳನ್ನು ಓದಿದರು. ಏನೂ ಹೇಳದೆ ನನ್ನ ಪುಸ್ತಕ ನನಗೆ ಮರಳಿ ಕೊಟ್ಟರು. ಮನೆಗೆ ಬಂದವಳೇ ಅದನ್ನು ನೀರೊಲೆಯೊಳಗೆ ಹಾಕಿಬಿಟ್ಟೆ.
ಬದುಕಿನ ವಾಸ್ತವ ಅನುಭವಗಳ ಆಧಾರವಿಲ್ಲದ ಆ ನನ್ನ 'ಸನಾತನ ಮೌಲ್ಯಗಳು' ಉರಿದು ಬೂದಿಯಾಗಿ ಹೋದವು.
ಎಂ.ಎ. ಎರಡನೆಯ ವರುಷದ ಕೊನೆಗೆ ಬಂದಾಯಿತು. ಸ್ನೇಹಿತರಾದ ಕೃಷ್ಣಮೂರ್ತಿ ಮತ್ತು ಗೀತಾಚಾರ್ಯ ಅವರ ಸಂಪಾದಕತ್ವದಲ್ಲಿ "ಸಂವಾದ" ಎನ್ನುವ ಅಧ್ಯಯನ ಕೇಂದ್ರದ ಕನ್ನಡ ಸಂಘದ ಪತ್ರಿಕೆ ಪ್ರಕಟವಾಯಿತು. ಅದಕ್ಕೆ ನನ್ನ ಹೊಸ ಕವಿತೆಯೊಂದನ್ನು , ಅದು ತಿರಸ್ಕೃತವಾಗಬಹುದೆಂಬ ಅನುಮಾನದಿಂದಲೇ ಕೊಟ್ಟಿದ್ದೆ. ಒಂದು ದಿನ ಹೀಗೆಯೇ ನಾವೆಲ್ಲಾ ಗೆಳತಿಯರು ತರಗತಿಯ ಕಟ್ಟೆಯೇಲೆ ಕುಳಿತಿದ್ದೆವು. ಎದುರಿಗೇ ಡಿ.ಆರ್ ಎನ್ ಅವರ ಸ್ಟ್ಯಾಫ್ ರೂಂ. ಯಾರೋ ಬಂದು ಡಿ.ಆರ್.ಎನ್ ಮೇಷ್ಟ್ರು ಕರೆಯುತ್ತಿದ್ದಾರೆಂದು ನನಗೆ ಹೇಳಿದರು. ನಾನು ಒಳಗೆ ಹೋದೆ . ಅವರ ಕೈಯಲ್ಲಿ ಸಂವಾದ ಪತ್ರಿಕೆ ! "ಚೆನ್ನಾಗಿ ಬರೆದಿದ್ದೀರಲ್ರೀ" ಎಂದರು. ನನಗೆ ತಲೆ ಗಿರ್ರನೆ ತಿರಗುವಂತಾಯ್ತು.,"keep it up" ಎಂದರು. ಅದೇ ನನ್ನ ಮೊದಲ ಕವನ ಸಂಕಲನದ ಮೊದಲ ಕವಿತೆಯಾಯಿತು "ಹೆಣ್ಣೊಬ್ಬಳ ದನಿ" ಎಂದು ಅದಕ್ಕೆ ಹೆಸರಿಟ್ಟೆ. ಸುಖಸಾಗರ್ ಹೊಟೆಲ್ ನಲ್ಲಿ ಎಂ.ಎ. ವಿದಾಯ ಕೂಟ ಮುಗಿದು ಹೊರಟಾಗ, ನನ್ನ ಬಳಿ ಬಂದು " you are an intelligent girl" ಎಂದಿದ್ದರು. ನನಗೆ ಕೋಡು ಮೂಡಿತ್ತು!!!
ಕನ್ನಡ ಅಧ್ಯಯನ ಕೇಂದ್ರದ ಎರಡು ವರುಷಗಳ ಅನುಭವ ಕೊಟ್ಟ ಸಂಸ್ಕಾರ ವಿಶಿಷ್ಟವಾದುದು. ಮಹತ್ವವಾದುದು. ಮಾನವೀಯ ಮೌಲ್ಯಗಳ ಜಾಡು ಹಿಡಿಸಿದ ವಿಭಾಗವನ್ನೂ ಅಲ್ಲಿನ ಗುರುಗಳನ್ನೂ ನಾನು ಮರೆಯುವಂತೆಯೇ ಇಲ್ಲ.
ಎಂ. ಎ. ಮುಗಿದನಂತರವೂ ಡಿ.ಆರ್.ಎನ್ ಮೇಷ್ಟ್ರ ಮನೆಗೆ ಅನೇಕ ಬಾರಿ ಹೋಗಿದ್ದೇನೆ. ಅವರ ಪಾಠ ಕೇಳಲು ಜೀವ ಬಿಡುತ್ತಿದ್ದವರು ಎಷ್ಟೋ ಮಂದಿ. ಅವರಲ್ಲಿ ನನ್ನ ಸಹಪಾಠಿ ಗಿರಿಜಾ ಕೂಡ ಒಬ್ಬಳು. ಅವಳು ಎಷ್ಟು ಗಟ್ಟಿಗಿತ್ತಿಯಂದರೆ ಕೊನೆಗೆ ಅವರನ್ನೇ ಜೀವನದ ಸಂಗಾತಿಯನ್ನಾಗಿಸಿಕೊಂಡುಬಿಟ್ಟಳು.
ಶಂಕರಾಚಾರ್ಯ, ನಾಗಾರ್ಜುನ ಕುರಿತ ಅವರ ಶಾಸ್ತ್ರಾರ್ಥಗಳು, ಸಂವಾದಗಳು, ಅಲ್ಲಮನ ಬಗಗೆ ಚರ್ಚೆಗಳು, ಅಭಿನವಗುಪ್ತನ ಚಿಂತನೆ,ಗೃಹವಾದಿನಿ ಮತ್ತು ಬ್ರಹ್ಮವಾದಿನಿ ಕುರಿತಾದ ಸ್ತ್ರೀವಾದದ ಹೊಸನೆಲೆ, ಶಕ್ತಿ ಶಾರದೆಯ ಮೇಳ ಮುಂತಾದವು ಕನ್ನಡ ಸಾಹಿತ್ಯದಲ್ಲಿ ಬಹಳ ಪ್ರಸಿದ್ಧವಾಗಿವೆ. ನನಗೆ ಇವುಗಳನ್ನು ಓದಿ ಪೂರ್ತಿಯಾಗಿ ಅರಗಿಸಿಕೊಳ್ಳುವ ಸಾಮರ್ಥ್ಯ ಇನ್ನೂ ಬಂದಿಲ್ಲ. ಇನ್ನು ಬರುವುದೂ ಕಾಣೆ! ತಮಿಳು ಕಾವ್ಯ ಮೀಮಾಂಸೆಯ ಹಾಗೆ ಪ್ರತ್ಯೇಕವಾದ ಕನ್ನಡ ಸಾಹಿತ್ಯ ಮೀಮಾಂಸೆಯೊಂದು ಇರಬೇಕೆಂದು ಪ್ರಯತ್ನಿಸಿದ ಮೊದಲಿಗರಲ್ಲಿ ಅವರೂ ಒಬ್ಬರು. ಸಾಹಿತ್ಯ ವಿಮರ್ಶೆಗೆ ಹೊಸ ರೂಪ ತೊಡೆಸಿದವರು. 'ಬಂಡಾಯ ಸಾಹಿತ್ಯ' ವೇದಿಕೆ ಹತ್ತಿದ ಮೊದಲ ದಿನಗಳಲ್ಲಿ ತಮ್ಮ ಸಹೋದ್ಯೋಗಿಗಳ ಜೊತೆ ಅವರ ಲಗುಬಗೆಯ ಓಡಾಟ ಕಣ್ಣಿಗೆ ಕಟ್ಟಿದಂತಿದೆ. ಅಂತಹ ಹರಿಕಾರರೊಬ್ಬರ ಶಿಷ್ಯ ಕೋಟಿಯಲ್ಲಿ ನಾನೂ ಒಬ್ಬಳೂ ಎನ್ನುವ ಹೆಮ್ಮೆ ನನಗೆ ಎಂದಿಗೂ ಇದೆ.
ಅವರೆಂದರೆ ಕಣ್ಣಿಗೆ ಕಾಣುವಷ್ಟು ವಿಸ್ತರಿಸಿಕೊಳ್ಳುವ ಸಮುದ್ರದ. ನಾವು ಮೊಗೆಯುವಷ್ಟೇ ನಮಗೆ ದಕ್ಕುವುದು.
ಅಂತಹ ಗುರು ಬದುಕಿದ್ದರೆ ಅವರಿಗೆ ಈಗ ಅರವತ್ತೇಳು ತುಂಬುತ್ತಿತ್ತು. ಆದರೆ ಅವರು ತಮ್ಮ ನಲವತ್ತೇಳರ ವಯಸ್ಸಿನಲ್ಲೇ ವಿದಾಯ ಹೇಳಿಬಿಟ್ಟರು. ಆದರೆ ಕನ್ನಡ ಸಾಹಿತ್ಯ ವಿಮರ್ಶೆಯ ಹಾದಿಯಲ್ಲಿ ಗಾಢವಾದ ಗೆರೆ ಮೂಡಿಸಿ ನಡೆದು ಬಿಟ್ಟರು.
ಸುಮಾರು ಮೂವತ್ತೈದು ವರುಷಗಳ ಹಿಂದೆ ಮುಂಬಯಿ ವಿ. ವಿ. ಕನ್ನಡ ವಿಭಾಗದಲ್ಲಿ ಶ್ರೀನಿವಾಸ ಹಾವನೂರರು ಏರ್ಪಡಿಸಿದ "ರಸ ವ್ಯಾಖ್ಯಾನ" ಕಾರ್ಯಕ್ರಮಕ್ಕೆ ಬಂದು 'ಒಡಲಾಳದ' ದ ಬಗ್ಗೆ ಮಾತನಾಡಿದ್ದರು. ನಾವು ಆಗ ಮುಂಬಯಿಯ ಮುಲುಂಡ್ ಎಂಬ ಪ್ರದೇಶದಲ್ಲಿ ಒಂದು ಬಾಡಿಗೆ ಮನೆಯಲ್ಲಿದ್ದೆವು. ಆಗ ಅಲ್ಲಿಗೆ ಬಂದು ನಮ್ಮ ಆತಿಥ್ಯ ಸ್ವೀಕರಿಸಿದ್ದರು
ಪುಟ್ಟ ಗೌರಿ ಗೋಡೆಯ ಮೇಲೆ ಬಿಡಿಸುವ ನವಿಲಿನ ಚಿತ್ರದಂತೆ ಅವರ ನೆನಪುಗಳು ಗರಿಗೆದರುತ್ತಿವೆ. ಅವರ ಸೃಜನಶೀಲತೆಯ ರೂಪಕವಾಗಿ ಹೊಳೆಯುತ್ತಿದೆ.
Labels:
d. r. nagaraj
Location:
Udupi, Karnataka, India
Subscribe to:
Post Comments (Atom)
No comments:
Post a Comment