Powered By Blogger

Saturday, August 29, 2020

ಮುರಳೀಧರ ಉಪಾಧ್ಯ ಹಿರಿಯಡಕ -ಕನ್ನಡಕ್ಕೆ ಬಾಸೆಲ್ ಮಿಷನರಿಗಳ ಕೊಡುಗೆ { ಪುಸ್ತಕ ವಿಮರ್ಶೆ } BASEL MISSION and KANNADA

ಧಾರವಾಡದ  ಕಿಟ್ಟೆಲ್ ವಿಜ್ಜಾನ  ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಿಕೆಯಾಗಿರುವ ಡಾ| ಗೀತಾ ಎಸ್. ನಂದಿಹಾಳ ಅವರು ಕರ್ನಾಟಕ ವಿಶ್ವವಿದ್ಯಾನಿಲಯದ ಪಿ.ಎಚ್.ಡಿ  ಪದವಿಗಾಗಿ ಬರೆದ ಸಂಪ್ರಂಧ ’ ಕನ್ನಡಕ್ಕೆ ಬಾಸೆಲ್ ಮಿಶನರಿಗಳ ಕೊಡ್ದುಗೆ. ಶುಸ್ಸೆರ್ ಎ. ಅವರು ’ಬಾಸೆಲ್ ಮಿಶನ್ ಸಂಘದ ನೂರು  ವರ್ಷಗಳ ಚರಿತ್ರೆಯು’ ಎಂಬ ಗ್ರಂಥ ೧೯೧೫ರಲ್ಲಿ ಮಂಗಳೂರಿನಲ್ಲಿ ಪ್ರಕಟವಾಯಿತು. ಡಾ| ಶ್ರೀನಿವಾಸ ಹಾವನೂರ್ ಅವರ್ ’ ಹೊಸ ಗನ್ನಡ ಅರುಣೋದ’ (೧೯೭೪) ಐ.ಮಾ. ಮುತ್ತಣ್ಣ ಅವರ್ ೧೯ನೆಯ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ’ (೧೯೭೩) ಡಾ| ಪೀಟರ್ ವಿಲ್ಸನ್ ಪ್ರಭಾಕರ ಅವರ ’ ದಕ್ಷಿಣ ಕನ್ನಡದಲ್ಲಿ ಬಾಸೆಲ್ ಮಿಶನ್, (೧೯೮೯), ಮ್ಯಾಥ್ಯೂ ಕೆ.ಎಂ. ಅವರ್ ರೆ| ಎಫ್. ಕೆಟೆಲ್ ಒಂದು ಸಮಗ್ರ ಅಧ್ಯಯನ್ (೧೯೯೪೭), ಜಿ.ಎಂ. ಹೆಗಡೆ  ಅವರ್ ರೆ| ಫರ್ಡಿನಾಂಡ್ ಕಿಟ್ಟೆಲ್ ಜೀವನ ಹಾಗೂ ಕೃತಿ ಸಮೀಕ್ಷೆ, (೧೯೯೪), ಡಾ| ಎಡ್ವರ್ಡ್ ನೊರೋನಾ ಅವರ ’ ಕನ್ನಡ ಧಾರ್ಮಿಕ ಸಾಹಿತ್ಯಕ್ಕೆ ಮಿಶನರಿಗಳ ಕೊಡುಗೆ(೧೯೯೬) ಇಂಥ ಅಧ್ಯಯನಗಳ ಮುಂದು ವರಿಕೆಯಾಗಿ ಡಾ| ಗೀತಾ ನಂದಿಹಾಳರ ಸಂಪ್ರಬಂಧ ಪ್ರಕಟವಾಗಿದೆ.


ಬಾಸೆಲ್ ಮಿಶನ್ (ಇವ್ಯಾಂಜಲಿಕರ್ ಮಿಶನರಿ ಸೊಸೈಟಿ   ಆಫ್ ಬಾಸೆಲ್) ೧೮೧೫ ರಲ್ಲಿ  ಜರ್ಮನಿಯ ಬಾಸೆಲ್ ಪಟ್ಟಣದಲ್ಲಿ ಆರಂಭಗೊಂಡಿತು. ನೂರ ಐವತ್ತಕ್ಕಿಂತ ಹೆಚ್ಚು ಮಂದಿ ಬಾಸೆಲ್ ಮಿಶನರಿಗಳು ಕರ್ನಾಟಕಕ್ಕೆ ಬಂದರು. ಈ ನಾಡು-ನುಡಿಗಳಿಗೆ ವಿಶಿಷ್ಟ ಕೊಡುಗೆ ನೀಡಿದರು.  ಹೆರ್ಮನ್ ಮೊಗ್ಮಿಂಗ್, ಜಾನ್ ಲೆಯರ್, ಯೋಹಾನ್ಸನ್ ಮುಲ್ಲರ್ ಗಾಡ್ ಫ್ರಿ ಎಚ್. ವೈಗಲ್, ಜಾರ್ಜ್ ವುರ್ಢ್, ಗಸ್ತಾವ್ ಕೀನ್, ಫೆಡ್ರಿಕ್ ಝಿಗ್ಲಿರ್, ಫರ್ಡಿನಾಂಡ್ ಕಿಟೆಲ್, ಬೆನಿಗಸ್ ಬಿ. ಕ್ರೇಟರ್,  ಕೌಫ್ ಮನ್, ಜೆ. ಮ್ಯಾಕ್, ಹೆರ್ಮನ್ ರಿಷ ಇವರೆಲ್ಲ ಧಾರ್ಮಿಕ ಸಾಹಿತ್ಯ, ಪಠ್ಯ ಪುಸ್ತಕ, ನಿಘುಂಟು ರಚನೆ ಹಾಗೂ ಗ್ರಂಥ ಸಂಪಾದನೆಯ  ಕ್ಷೇತ್ರಗಳಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಗೀತಾ ನಂದಿಹಾಳರು ಈ ಸಂಪ್ರಬಂಧದಲ್ಲಿ ಬಾಸೆಲ್ ಮಿಶನ್ ಸ್ಥಾಪನೆ, ಪರಂಪರೆ, ಭಾರತಕ್ಕೆ ಮಿಶನರಿಗಳ ಆಗಮನ, ಕರ್ನಾಟಕಕ್ಕೆ ಬಾಸೆಲ್ ಮಿಶನ್, ಮಿಶನರಿಗಳ ಜೀವನ   ಸಾಧನೆ, ಅವರ ಸಾಹಿತ್ಯ ಸೇವೆಯ  ವಿವಿಧ ಮುಖಗಳು,  ವಿದೇಶೀ ಭಾಷೆಗಳಲ್ಲಿ ಕನ್ನಡ ಸಂಶೋಧನೆ ಈ ವಿಷಯಗಳನ್ನು ಸಮೀಕ್ಷಿಸಿದ್ದಾರೆ.
ಬಾಸೆಲ್ ಮಿಶನ್ ಭಾರತೀಯ  ಧರ್ಮ ಶಾಸ್ತ್ರ ಪ್ರಾಚೀನ ಸಾಹಿತ್ಯ ಹಾಗೂ ಸಂಸ್ಕೃತಿಯ ಅಧ್ಯಯನಗಳಿಗೆ ಮುಕ್ತ ಅವಕಾಶ ನೀಡಿತು. ಯೇಸುಕ್ರಿಸ್ತನನ್ನು ಕಥಾನಾಯಕ ನನ್ನಾಗಿ ಮಾಡಿಕೊಂಡು ಕಿಟ್ಟೆಲ್ಲರು ಕನ್ನಡದಲ್ಲಿ ಬರೆದ ’ ಕಥಾಮಾಲೆ’ಗೆ ಕನ್ನಡ ಕಾವ್ಯ ಪರಂಪರೆಯಲ್ಲಿ ಐತಿಹಾಸಿಕ ಮಹತ್ವವಿದೆ. ಕಿಟ್ಟೆಲ್ ರ ಕ್ರೈಸ್ತ ಸಭಾ ಚರಿತ್ರೆ’ ೭೮೮ ಪುಟಗಳ ದೊಡ್ಡ ಪುಸ್ತಕ. ಇದರಲ್ಲಿ ಹೊಸಗನ್ನಡ   ಗದ್ಯ   ವಿಕಾಸದ ಹೆಜ್ಜೆ ಗುರುತುಗಳಿವೆ. ಕನ್ನಡ ಗ್ರಂಥ ಸಂಪಾದನೆಗೆ ಬುನಾದಿ ಹಾಕಿದ ವರು ಬಾಸೆಲ್ ಮಿಶನರಿಗಳು.ಬಾಸೆಲ್ ಮಿಶನ್ ಪ್ರಕಟಿಸಿದ ಜೈಮಿನಿ ಭಾರತ (೧೮೪೮), ’ಬಸವ ಪುರಾಣ’ (೧೮೫೦), ’ದಾಸರ ಪದಗಳು’
(೧೮೫೦) ಇಂಥಗಳಿಂದ ಕನ್ನಡ ಸಾಹಿತ್ಯ, ಹಸ್ತಪ್ರತಿ ಪರಂಪರೆಯಿಂದ ಮುದ್ರಣ ಪರಂಪರೆಯತ್ತ ಚಲಿಸಿತು. ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು ’ನಾನೇರು ವೆತ್ತರಕೆ ನೀನೇರಬಲ್ಲೆಯಾ’ ಎಂದು ಸವಾಲು ಹಾಕುವ ಅಸಾಧಾರಣ ನಿಘಂಟು, ಯಕ್ಷಗಾನ  ಜನಪದ  ಸಾಹಿತ್ಯದ ಅಧ್ಯಯನದಲ್ಲಿ ಮಿಶನರಿಗಳು ಮೊದಲಿಗರಾಗಿದ್ದಾರೆ.

 ತಾನು ಆಯ್ಕೆ ಮಾಡಿಕೊಂಡ ವಿಷಯದ ತಲಸ್ಪರ್ಶಿ ಅಧ್ಯಯನ ನಡೆಸಿ, ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಸಂಪ್ರಬಂಧವೊಂದನ್ನು ನೀಡಿದ ಡಾ| ಗೀತಾ ನಂಡಿಹಾಳಾರು ಅಭಿನಂದನಾರ್ಹರು. ಇದು ’ಎತ್ತಣ ಬಾಸೆಲ್, ಎತ್ತಣ ಕರ್ನಾಟಕ, ಎತ್ತಣೆಂದೆತ್ತ ಸಂಬಂಧವಯ್ಯಾ ಎಂದು ಬೆರಗುಗೊಳಿಸುವ ಸಂಪ್ರಬಂಧ.
ಮುರಳೀಧರ ಉಪಾಧ್ಯ ಹಿರಿಯಡಕ

ಕನ್ನಡಕ್ಕೆ ಬಾಸೆಲ್ ಮಿಶನರಿಗಳ ಕೊಡುಗೆ
ಲೇ:ಡಾ| ಗೀತಾ ಎಸ್. ನಂದಿಹಾಳ ಪ್ರ: ಕಿಟ್ಟೆಲ್ ಕಲಾ ಮಹಾವಿದ್ಯಾಲಯ, ಧಾರವಾಡ-೫೮೦೦೦೧
ಮೊದಲ ಮುದ್ರಣ:೨೦೦೩ ಬೆಲೆ ರೂ.೨೦೦.

No comments:

Post a Comment