Powered By Blogger

Sunday, August 30, 2020

ಗಿರಿಜಾ ಶಾಸ್ತ್ರಿ - ಪ್ರತಿಭಾ ನಂದಕುಮಾರ್ ಅವರ ಕಾವ್ಯ KANNADA POET PRATHIBHA NANDAKUMAR

ಹೆಣ್ಣು- ಕಾಡು
ಮೂವತ್ತು ವರುಷಗಳ ಮಾತಿದು. ಒಬ್ಬ ಪ್ರಸಿದ್ಧ ವಿಮರ್ಶಕರ ಸ್ತ್ರೀವಾದಿ ಹೆಂಡತಿಯೊಬ್ಬರು " ಮೆಣಸಿನ ಪುಡಿ ಹಪ್ಪಳ ಮಾಡುವ ಹೆಂಗಸರಿಗೆ ಬುದ್ಧಿಯಿಲ್ಲ" ಎಂದು ಸಾರಿದರು. ಹೀಗೆ ಅನೇಕ ಮಹಿಳೆಯರು ಅಂದು ಸ್ತ್ರೀವಾದದ ಭರತದಲ್ಲಿ ಪಿತೃಪ್ರಧಾನತೆ ಎತ್ತಿಹಿಡಿಯುವ ಮೌಲ್ಯಗಳನ್ನೇ ತಾವೂ ಎತ್ತಿಹಿಡಿಯುವ ಅಪಾಯಕ್ಕೆ ಸಿಲುಕಿದರು. ಓಶೋ "ಗಂಡಸು ಪ್ರಬಲ ಅವನಂತೆ ಆಗಬೇಕೆಂದು ಅವನನ್ನು ಅನುಸರಿಸುವ ಮಹಿಳೆಯರು ಇತ್ತ ಹೆಣ್ಣುತನವನ್ನೂ ಉಳಿಸಿ ಕೊಳ್ಳದೇ ಅತ್ತ ಗಂಡೂ ಆಗದೇ ಎಡಬಿಡಂಗಿಗಳಾಗಿಬಿಡುತ್ತಾರೆ" ಎಂದು ಉದ್ಗಾರ ತೆಗೆದದ್ದು ಮಹಿಳೆಯರು ಇಂತಹ ಅಪಾಯಕ್ಕೆ ಸಿಲುಕಿದ ಕಾಲದಲ್ಲೇ.
ಈಗ ಕಾವೇರಿಯಲ್ಲಿ ಬಹಳ ನೀರು ಹರಿದು ಹೋಗಿದೆ.
೯೦ ರ ದಶಕದನಂತರ ಕನ್ನಡ ಮಹಿಳಾ ಕಾವ್ಯದಲ್ಲಿ ಒಂದು ರೀತಿಯ paradigm shift ನ್ನು ಕಾಣುತ್ತೇವೆ. ಇದು ಒಟ್ಟು ಕನ್ನಡ ಸಾಹಿತ್ಯಕ್ಕೆ ನಿಜವಾದರೂ ನಾನು ಸದ್ಯ ಕೇಂದ್ರೀಕರಿಸಿರುವುದು ಮಹಿಳಾ ಕಾವ್ಯವನ್ನು ಮಾತ್ರ. ಹೆಣ್ಣು ಬಲಿಪಶು ಧೋರಣೆ (victim mode) ಯಿಂದ ಯಶಸ್ವೀ ಮಹಿಳೆ ಅಥವಾ ಗೆದ್ದ ಮಹಿಳೆ (survivor mode) ಧೋರಣೆಗೆ ತಿರುವನ್ನು ಪಡೆದುಕೊಂಡ ಮಹತ್ವದ ಹಂತ. ಅದುವರೆಗೂ ಹೆಣ್ಣು ಮೋಹಿನಿ ಅಥವಾ ದೇವಿಯಾಗಿದ್ದವಳು ಇವೆರೆಡು ಅತಿಗಳ ಮಧ್ಯದ ಅನಂತ ಸಾಧ್ಯತೆಗಳ ಸುವರ್ಣ ಮಧ್ಯಮವನ್ನು (grey area) ತೆರೆದುಕೊಂಡ ಹಂತವಿದು. ತನ್ನ ಅಸ್ಮಿತೆಯನ್ನು ಬಲವಾಗಿ ನಿರೂಪಿಸಿದ ಹಂತವಿದು. ಇದರ ಒಂದು ಪ್ರತೀಕವಾಗಿ ಪ್ರತಿಭಾ ನಂದಕುಮಾರ್ ಅವರ "ಹೆಣ್ಣು- ಕಾಡು" ಎನ್ನುವ ಕವಿತೆಯನ್ನು ವಿಶ್ಲೇಷಿಸಿದ್ದೇನೆ. ಆ ಕವಿತೆಯ ಫೋಟೋವನ್ನು ಸಹ ಹಾಕಿದ್ದೇನೆ ಆಸಕ್ತರು ಗಮನಿಸಬಹುದು.
ಪ್ರತಿಭಾ ಇಲ್ಲಿ ಹೆಣ್ಣನ್ನು 'ಕಾಡು' ಎನ್ನುತ್ತಾರೆ. ಇದು ಕ್ರಿಯಾಪದವಾಗಿ ಕೂಡಾ ಯಶಸ್ವಿಯಾಗಿದ್ದರೂ ನಾಮಪದವಾಗಿ ತೆರೆದುಕೊಳ್ಳುವ ಅರ್ಥಾಂತರಗಳು ವಿಸ್ಮಯಗೊಳಿಸುತ್ತವೆ.
ಕಾಡು ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು, ಅನೂಹ್ಯವಾದದ್ದು, ಅಭೇದ್ಯವಾದದ್ದು, ನಿಗೂಢವಾದದ್ದು, ದಟ್ಟ ಮರಗಳಿಂದ ಕೂಡಿರುವಂತಹದ್ದು. ಕ್ರೂರ ಪ್ರಾಣಿಗಳಿರುವುದರಿಂದ ಭಯಾನಕವಾಗಿರುವಂತಹದ್ದು, ಜಿಂಕೆ, ನವಿಲು, ಹಸಿರು, ನದಿ ಇವುಗಳು ಇರುವುದರಿಂದ ಆಪ್ಯಾಯಮಾನವಾಗಿರುವಂತಹದ್ದು ಕೂಡ. ಕಾಡು ಮೋಡಗಳನ್ನು ತಡೆದು ಮಳೆಗೆ ಕಾರಣವಾದುದರಿಂದ, ತನ್ನ ಘ್ಹನವಾದ ಬೇರುಗಳಿಂದ ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಕಾರಣದಿಂದ ಇದು ಜೀವದಾಯನಿಯೂ ಹೌದು. ಪುರುಷ ತನ್ನ ಮೋಕ್ಷ ಸಾಧನೆಗಾಗಿ ಹೊಗುವ ಗಹ್ವರವೂ ಹೌದು. ಹಾಗಾಗಿ ಸರಿಯಾದ ಸಿದ್ಧತೆ ಯಿಲ್ಲದಿದ್ದರೆ ಈ ಕಾಡಿನೊಳಗೆ ಪ್ರವೇಶ ಸಾಧ್ಯವಿಲ್ಲ.
ಹೆಣ್ಣು ಹೀಗೆ ಕಾಡಿನ ಹಾಗೆ ಅನೇಕ ವೈರುಧ್ಯಗಳ ಮೊತ್ತ. ಅಷ್ಟೇ ಸಂಕೀರ್ಣ, ಅನೇಕ ದ್ವಂದ್ವಗಳ ಊಟೆ. ಮಹಾ ಶಕ್ತಿಶಾಲಿ.
ಪ್ರತಿಭಾ ಅವರ 'ಹೆಣ್ಣು- ಕಾಡು' ಕವಿತೆ ಓದಿದ ತಕ್ಷಣ ನನಗೆ F.W.Bain ಎನ್ನುವವನು ತನ್ನ "Digit of the Moon" ಗ್ರಂಥದಲ್ಲಿ ಉಲ್ಲೇಖಿಸಿದ ಒಂದು ಸಂಗತಿ ನೆನಪಾಗುತ್ತಿದೆ. ಅದನ್ನು ಕ್ವಚಿತ್ತಾಗಿ ಇಲ್ಲಿ ಹಂಚಿಕೊಳ್ಳುತ್ತಿರುವೆ.
ಒಮ್ಮೆ ಸೃಷ್ಟಿಕರ್ತ , ಸೃಷ್ಟಿಯ ಪ್ರಾರಂಭದಲ್ಲಿ ಹೆಣ್ಣನ್ನು ಸೃಷ್ಟಿಸಲು ತೊಡಗಿದ ತಕ್ಷಣ ಅವನಿಗೆ ಹೊಳೆಯಿತಂತೆ- ಈಗಾಗಲೇ ಗಂಡನ್ನು ಸೃಷ್ಟಿಸುವುದರಲ್ಲಿಯೇ ಎಲ್ಲ ಸಲಕರಣೆ, ಸಾಧನೋಪಾಯಗಳೆಲ್ಲ ಮುಗಿದು ಹೋಗಿ ಯಾವುದೇ ಮೂಲವಸ್ತುವೂ ಉಳಿದಿಲ್ಲವೆಂದು. ಹೀಗಾಗಿ ಬಹಳ ಕಾಲದ ತಪಸ್ಸಿನ ನಂತರ ಅವನು ತನ್ನ ತಪಸ್ಸಿನ ಶಕ್ತಿಯಿಂದ ಏನು ಮಾಡಿದನೆಂದರೆ, ಚಂದಿರನ ದುಂಡಾದ ಆಕಾರ, ಬಳ್ಳಿಗಳ ಬಳಕುವ ಸಪೂರತೆ, ಆನೆಯ ಸೊಂಡಿಲಿನ ಲಾಲಿತ್ಯ, ಜಿಂಕೆಯ ಕಣ್ಣೋಟ, ಜೊಂಪೆಯಾದ ದುಂಪಿಗಳ ಸಾಲು, ಸೂರ್ಯನ ಕಿರಣಗಳ ಹೊಳಪು, ಮೋಡದ ತುಂತುರು, ಗಾಳಿಯ ಚಂಚಲತೆ, ಮೊಲದ ಪುಕ್ಕಲುತನ, ನವಿಲಿನ ಜಂಭ, ಗಿಣಿಯ ಮೃದುತ್ವ, ಬೆಂಕಿಯ ಬಿಸುಪು, ಮಂಜಿನ ತಂಪು, ಹಠಮಾರಿತನದ ಕಠೋರತೆ, ಮೂರ್ಖರ ಹರಟೆ, ಕೋಗಿಲೆಯ ಕಂಠ, ಬಕದ ಸಮಯ ಸಾಧಕತೆ, ಚಕ್ರವಾಕದ ನಿಷ್ಥೆ- ಈ ಎಲ್ಲವನ್ನೂ ಒಟ್ಟು ಸೇರಿಸಿ ಹೆಣ್ಣೆಂಬ ಜೀವವನ್ನು ಸೃಷ್ಟಿ ಮಾಡಿ ಗಂಡಿಗೆ ಕೊಟ್ಟನಂತೆ. ಅಗ ಗಂಡು "what is to be done? for, I cannot live either with or without her" ಎಂದು ಉದ್ಗಾರ ತೆಗೆದನಂತೆ.
ಪ್ರತಿಭಾ ಅವರ ಹೆಣ್ಣು - ಕಾಡು ಕವಿತೆಯಲ್ಲಿರುವ ಹೆಣ್ಣು ಕೂಡ F.W.Bain ಹೇಳಿದ ಹೆಣ್ಣೇ. ಇಂತಹ ವೈರುಧ್ಯಗಳ, ಸಂಕೀರ್ಣ ವ್ಯಕ್ತಿತ್ವದ ಹೆಣ್ಣು ಪಿತೃಪ್ರಧಾನತೆಯ ಸಪಾಟು ದೃಷ್ಟಿಕೋನಕ್ಕೆ (linear) ಹೇಗೆ ತಾನೇ ದಕ್ಕಿಯಾಳು?
ಪ್ರತಿಭಾ ಅವರ ಈ 'ಕಾಡು' ಹೆಣ್ಣಿನ ಭೌತಿಕ ಶರೀರವನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ. ಇದು ಅವಳ ಅಂತರಂಗವನ್ನು, ಅವಳ ಮನೋವಲಯವನ್ನು ಪ್ರತಿನಿಧಿಸುತ್ತದೆ.
ಇಲ್ಲಿ, ಅವಳ ತಲೆಯೊಳಗೆ ಹುಲಿಯ ಗರ್ಜನೆ ಇದೆ. ಅವಳದು ಕರಡಿಯ ನಡಿಗೆ, ಹೊಟ್ಟೆಯೊಳಗೆ ಘೇಂಡಾಮೃಗ, ಎದೆಯೊಳಗೆ ಕುಣಿಯುವ ಹುಲ್ಲೆ, ಮಿಡಿಯುವ ಹೃದಯದಲ್ಲಿ ಮಿಂಗುಡುವ ಬೆಕ್ಕು, ಅರಳಿದರೆ ನೆಲ ನಡುಗುವ ಪಾರಿಜಾತ ಅವಳು. ಸುಟ್ಟರೂ ಈ ಕಾಡು ತನ್ನಿಂದ ತಾನೇ ಚಿಗುರನ್ನು ಚಿಮ್ಮಿಸುತ್ತದೆ. ಹೆಣ್ಣು ಹಾಗೇ ಫೀನಿಕ್ಸ್ ಹಕ್ಕಿಯಂತೆ ಬೂದಿಯಿಂದಲೇ ಎದ್ದು ಬರುತ್ತಾಳೆ. ಅವಳು ಸೃಷ್ಟಿಗೆ ಕಾರಣವಾಗುವ ಆಡೆಮ್ ಮತ್ತು ಈವ್ ಇವರು ತಿನ್ನುವ ಸೇಬು.
ಪುರುಷ ತೋಳು ಚಾಚಿದರೆ ಬರೀ ಗಾಳಿ. ಅದರೆ ಇವಳು ಎದೆತೆರೆದರೆ ಸಂಪೂರ್ಣ ಸಮ್ರಾಜ್ಯ.
ಹೀಗೆ ಪ್ರೀತಿಸಿದವರಿಗೆ ತನ್ನನ್ನೇ ಕೊಟ್ಟುಬಿಡುವ ಹೆಣ್ಣೆಂದರೆ ಪುರುಷನಿಗೆ ಸದಾ ಭಯ. ಬದುಕು ನಶ್ವರ ವಾಗಿರುವುದರಿಂದ ಅವನು ಸಾವಿನ ಬಗ್ಗೆ ಮತನಾಡುತ್ತಾನೆ. ಆನಂತರದ ಬಗ್ಗೆ ಮಾತನಾಡುತ್ತಾನೆ. ಹೆಣ್ಣು ಈ ನೆಲಕ್ಕಂಟಿದವಳು. ಆಕಾಶಗಾಮಿಯಾದ ಪುರುಷನಿಗೆ ನೆಲದ ( ಹೆಣ್ಣಿನ)ಗುರುತ್ವಾಕರ್ಷಣೆಯ ಸೆಳೆತಕ್ಕೆ ಸಿಕ್ಕಿ ದೊಪ್ಪನೆ ನೆಲಕ್ಕೆ ಬೀಳುವ ಭಯ. ಆದುದರಿಂದಲೇ ಅವಳ ಆಕರ್ಷಣೆಯಿಂದ ತಪ್ಪಿಸಿಕೊಂಡು ಓಡುತ್ತಾನೆ. "ಥೂ ಹೇಡಿ ದೇವರು ನೀನು" ಎನ್ನುತ್ತಾರೆ ಕವಿ. ಗಂಡನೂ ದೇವರೇ ತಾನೇ? 'ಎಷ್ಟು ಕುರಿ ಕೋಣಗಳನ್ನು' ನುಂಗಿ ನೀರುಕುಡಿದರೂ ಹೆಣ್ಣಂತೆ ಪ್ರೀತಿಸುವುದನ್ನು ಅರಿಯದ 'ದಡ್ಡ' ಅವನು.
'ಅವಳು ಅತ್ತರೆ ಮೊಲೆ ಕೊಡುವ ತಾಯಿ/ ಅಳದಿದ್ದರೂ ಚುಕ್ಕು ತಟ್ಟುವ ಧಾರಾಳಿ' ಈ ಸಹನೆ, ಪ್ರೀತಿ ಗಂಡಿಗೆಲ್ಲಿ ಬರಬೇಕು? ಅವಳ ಪ್ರೀತಿ ಅನಿಯಂತ್ರಿತವಾದುದು (unconditional).
ಅವಳಂತೆ ಪ್ರೀತಿಸುವುದನ್ನು ಕಲಿತು ಬಿಟ್ಟರೆ ಅವನೂ ಹೆಣ್ಣಾಗಿಬಿಡುತ್ತಾನೆ. ಅವನಿಗೆ ಸದಾ ಹೆಣ್ಣಾಗುವ ಭಯ. 'ಬಳೆ ತೊಡುವ ಅಪಮಾನದ ಸಿಂಹ ಸ್ವಪ್ನ' ಅವನು ದಡ್ಡ ಯಾಕೆಂದರೆ ಆತ್ಯಂತಿಕವಾದ ಸತ್ಯವನ್ನು ಹಿಡಿಯಲು (absolute) ಹೆಣ್ಣಾಗಬೇಕಾದುದು ಆವಶ್ಯಕ ಎಂದು ಅವನಿಗೆ ಗೊತ್ತಿಲ್ಲ. ಕೃಷ್ಣನೊಬ್ಬನೇ ಗಂಡಸು ಉಳಿದೆಲ್ಲಾ ಭಕ್ತರು ಗೋಪಿಯರು. ಶಿವನೊಬ್ಬನೇ ಗಂಡಸು ಲಿಂಗಪತಿ, ಉಳಿದ ಶರಣರೆಲ್ಲಾ ಸತಿಯರು -ಶರಣ ಸತಿ. ಇದನ್ನು ಅರಿಯದ ದಡ್ಡ ಅವನು.
ಪ್ರತಿಭಾ ಇಲ್ಲಿ ಹೆಣ್ಣು =ದೇವಿ= ಪ್ರಕೃತಿ ಎನ್ನುವ ಒಂದು ಸೂತ್ರವನ್ನು ಹರಿಯಬಿಟ್ಟಿದ್ದಾರೆ. ದುರಂತವೆಂದರೆ ಇಂತಹ ಶಕ್ತಿಶಾಲಿಯಾದ ಹೆಣ್ಣಿನ ಸ್ವರೂಪದ ಬಗ್ಗೆ ಅವನಿಗೆ ವಿಸ್ಮೃತಿ ಬಂದುಬಿಟ್ಟಿದೆ. ಆದುದರಿಂದಲೇ ಅವನಿಗೆ ಅವಳು ಉಪಭೋಗದ ವಸ್ತುವಾಗಿ, ಎರಡನೆಯ ದರ್ಜೆಯ ಪ್ರಜೆಯಾಗಿ ಕಾಣಿಸುತ್ತಾಳೆ. ಅವನ ಕಾಲೊರೆಸು ಆಗಿದ್ದಾಳೆ.
ಆದುದರಿಂದಲೇ ಅವಳು ಅವನ ಮುಂದೆ ದೇಹಿ ಎಂದು ಮೈ ಕುಗ್ಗಿಸಿ, ಹಿಡಿಯಾಗಿಸಿ ಬೇಡಬೇಕಾಗಿದೆ. ಅವನಿಗೋ ಇವಳ ದೈಹಿಕ ಆಕಾರ (ಸೀರೆಯ ಬಣ್ಣದ ಹೊರತು) ಬಿಟ್ಟರೆ ಬೇರೇನೂ ಕಾಣದು. ಯಾಕೆಂದರೆ ಅವನಿಗೆ ದೃಷ್ಟಿಮಂದವಾಗಿಬಿಟ್ಟಿದೆ.
ಹೀಗೆ ಹೆಣ್ಣು ಇರುವ ಮತ್ತು ಅವಳನ್ನು ಸಮಾಜ ಕಾಣಿಸುವ ನಡುವಿನ ವೈರುಧ್ಯಗಳನ್ನು ಪ್ರತಿಭಾ ಸೊಗಸಾಗಿ ಪರಿಣಾಮಕಾರಿಯಾಗಿ ಬಿಚ್ಚಿಟ್ಟಿದ್ದಾರೆ.

No comments:

Post a Comment