Powered By Blogger

Friday, August 21, 2020

ಮುರಳೀಧರ ಉಪಾಧ್ಯ ಹಿರಿಯಡಕ - -- ಮಂಟೇಸ್ವಾಮಿ { ಜನಪದ ಮಹಾಕಾವ್ಯ } ಸಂ- ಹಿ. ಚ .ಬೋರಲಿಂಗಯ್ಯ

 ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಮಹಾಕಾವ್ಯ ಮಾಲೆಯಲ್ಲಿ ’ ಮಂಟೇಸ್ವಾಮಿ’ ಜನಪದ ಮಹಾಕಾವ್ಯ ಪ್ರಕಟವಾಗಿದೆ. ಈ ಕಾವ್ಯ ಸಮಗ್ರ ರೂಪದಲ್ಲಿ ಮೊದಲ ಬಾರಿಗೆ ಪ್ರಕಟವಾಗುತ್ತಿದೆ. ಎಂಟುನೂರ ಇಪ್ಪತ್ತೆರಡು ಪುಟಗಳಷ್ಟು ದೀರ್ಘವಾಗಿ ರುವ ಈ ಕಾವ್ಯದ ಏಕ ವ್ಯಕ್ತಿ ಪಾಠವನ್ನು ಹಿ.ಚಿ. ಬೋರಲಿಂಗಯ್ಯ ನವರು ಚೆನ್ನಾಗಿ ಸಂಪಾದಿಸಿದ್ದಾರೆ. ಅಲಿಖಿತ ಪರಂಪರೆಯ ಈ ಮಹಾಕಾವ್ಯವನ್ನು ಹಾಡಿರುವವರು ಮೈಸೂರು ಬಳಿಯ ಹಿನಕಲ್ಲಿನ ಶ್ರೀ ಮಹದೇವಯ್ಯ ನವರು. ಅವರ ಸಂದರ್ಶನ ಈ ಗ್ರಂಥದ ಕೊನೆಯಲ್ಲಿದೆ. ಲೌಕಿಕ ವೃತ್ತಿ ಗಾಯಕರಾದ ನೀಲ ಗಾರರು ಮಂಟೇಸ್ವಾಮಿಯ ಕಾವ್ಯವನ್ನು ಹಾಡುತ್ತಾರೆ. ಮಂಟೇಸ್ವಾಮಿಗೆ ’ ಧರೆಗೆ ದೊಡ್ಡವರು’, ಪ್ರಭುಸ್ವಾಮಿ;, ಪರಂಜ್ಯೋತಿ’ ಮುಂತಾದ ಹೆಸರುಗಳಿವೆ. ಈ ಕಾವ್ಯದ ಭಾಗಗಳನ್ನು ’ಸಾಲು’ ಎನ್ನುತ್ತಾರೆ. ಜಗತ್ತು ಸೃಷ್ಟಿ, ಕಲ್ಯಾಣ ಪಟ್ಟಣ, ರಾಚಪ್ಪಾಜಿ, ಬೊಪ್ಪಗೌಡ್, ಕೆಂಪಾಚಾರಿ, ಫಲಾರದಯ್ಯ, ಕಲಿಪುರುಷ, ಸಿದ್ದಪ್ಪಾಜಿ ಎಂಬ ಎಂಟು ’ಸಾಲುಗಳು’ ಈ ಕಾವ್ಯದಲ್ಲಿವೆ.
’ ಕಲ್ಯಾಣ ಪಟ್ಟಣದ ಸಾಲು’ ಮಂಟೇಸ್ವಾಮಿ ಕಾವ್ಯದ ಅತ್ಯುತ್ತಮ ಭಾಗ. ಮಂಟೇಸ್ವಾಮಿ  ಕುಷ್ಠ ರೋಗಿಯ ಅಸಹ್ಯ ವೇಷ ಹಾಕಿಕೊಂಡು ಕಲ್ಯಾಣಕ್ಕೆ ಹೋದಾಗ ಅವನಿಗೆ ಪ್ರವೇಶ ಸಿಗುವುದಿಲ್ಲ. ಅವನ ಪವಾಡಗಳನ್ನು ಕಂಡ ಬಸವಣ್ಣ, ನೀಲಮ್ಮ ದಂಪತಿಗಳು ಅವನಿಗೆ ಶರಣಾಗುತ್ತಾರೆ. ಮಾದಿಗರ ಚೆನ್ನಯ್ಯ, ಅಂಬಿಗರ  ಚೌಡಯ್ಯ, ಮಡಿವಾಳ ಮಾಚಪ್ಪರಂಥ  ಶರಣವೇ ನಿಜವಾದ ಶರಣರು ಎಂಬ ಅರಿವು  ಬಸವಣ್ಣನವರಲ್ಲಿ ಮೂಡುತ್ತದೆ. ಅಲ್ಲಮ ಪ್ರಭುವಿನಂಥ ಅವಧೂತನಾಗಿ ಕಾಣೆಸುವ ಮಂಟೇಸ್ವಾಮಿ, ರಾಚಪ್ಪಾಜಿ, ಫಲಾರದಯ್ಯ ಸಿದ್ಧಪ್ಪಾಜಿ ಮತ್ತಿತರ ಶಿಷ್ಯರ ಮೂಲಕ ತನ್ನ ಪವಾಡಗಳನ್ನು ಮೆರೆಯುತ್ತಾನೆ.
 ಸಂಪಾದಕ ಹಿ.ಚಿ. ಬೋರಲಿಂಗಯ್ಯ ನವರು  ಬರೆದಿರುವಂತೆ " ಶರಣರ ಜನಪದ ಚಳವಳಿಯ ಮೂಲಕ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಬೀದಿಗೆ ಬಂದ ಕೆಳ ವರ್ಗದ ಜನ್, ನಂತರದ ಅನಿರೀಕ್ಷಿ ಸೋಲಿನಿಂದಾಗಿ ಹತಾಶರಾಗಿ ತಮ್ಮ ತಮ್ಮ ದಾರಿಗಳನ್ನು ತಾವು ಹಿಡಿದಂತೆ ಕಾಣುತ್ತದೆ. ಈ ಹಿನ್ನಲೆಯಲ್ಲಿ ಮಾದೇಶ್ವರ ಮತ್ತು ಮಂಟೇಸ್ವಾಮಿ ಯವರನ್ನು ನಾವು ನೋಡಬೇಕಾಗಿದೆ."
 ಮಂಟೇಸ್ವಾಮಿ.
ಕವಿ: ಪೋ| ಹಿ.ಚಿ. ಬೋರಲಿಂಗಯ್ಯ
ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ವಿದ್ಯಾರಣ್ಯ-೫೮೩೨೨೧
-----ಮುರಳೀಧರ ಉಪಾಧ್ಯ
Manteswami -ಮಂಟೇಸ್ವಾಮಿ

No comments:

Post a Comment