Powered By Blogger

Friday, August 28, 2020

RAGHUPATHI THAMANKAR ---ಮುಂಡಾಜೆ ರಾಮಚಂದ್ರ ಭಟ್ ಅವರ " - " ಚೌತಿಯ ಪದ "

ಏನೀ ಅದ್ಭುತವೇ ಗೆಳತೀ..
ಮುಂಡಾಜೆಯ ಕವಿ ದಿ.ಬಿ .ರಾಮಚಂದ್ರ ಭಟ್ಟರು ಬರೆದ ' ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ ಆನೆಯ ಸೊಂಡಿಲ ಮೊಗವಿತ್ತು..' .
ಅ ಆ ಇ ಈ ಉ ಊ ಎ ಏ ಐ ಒ ಓ ಔ ಅಂ ಅಃ ಬಳಸಿ ಈ ಹಾಡನ್ನು ಬರೆದವರ ಬಗ್ಗೆ ಹಾಗೂ ಅವರ ಹಾಡುಗಳ ಬಗ್ಗೆ ಇನ್ನಷ್ಟು.( ಅವರು ನನ್ನ ಚಿಕ್ಕಪ್ಪ. ಅವರನ್ನು ಸ್ಮರಿಸುತ್ತ ಮುಂದಿನ ಲೇಖನ ಬರೆಯುತ್ತಿರುವೆ .ಅವರಿಗೆ ಈ ಲೇಖನ ಅರ್ಪಣೆ)
ನಾಲ್ಕು ದಿನಗಳಿಂದ ಗಣಪತಿ ಯನ್ನು ಕುರಿತ ಈ ಮೇಲಿನ ಹಾಡು ಮೊಬೈಲ್ ನಲ್ಲಿ ಭರತ ನಾಟ್ಯ ಕಲಾವಿದೆ ವಿದುಷಿ ಶ್ರೀಮತಿ ಮಾನಸಿ ಸುಧೀರ್ ರವರ ಭಾವಾಭಿನಯದ ಮೂಲಕ ರಿಂಗಣಿಸುತ್ತಿದೆ. ಅದನ್ನು ಬರೆದವರು ಯಾರು ಎಂದೆಲ್ಲ ಪೇಪರುಗಳಲ್ಲಿ ಬರುತ್ತಿದೆ ಪ್ರಜಾವಾಣಿಯಲ್ಲಿಯ ವಿವರವಾದ ಲೇಖನ ಓದಿರಿ .ಹಾಡನ್ನು ಕೇಳಲು ಅದರ ಕೊಂಡಿಯನ್ನು ಕೊನೆಗೆ ಕೊಟ್ಟಿರುವೆ.
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಹತ್ತಿರದ ಮುಂಡಾಜೆ ಎಂಬ ಹಳ್ಳಿಯ ದಿ . ಬಿ ರಾಮಚಂದ್ರ ಭಟ್ಟರು ಸುಮಾರು ಏಳು ದಶಕಗಳ ಹಿಂದೆ ಬರೆದ ಈ ಹಾಡು , ಲಾಕ್ ಡೌನ್ ಸ್ಥಿತಿಯಲ್ಲಿನ ಈ ಅವಧಿಯಲ್ಲಿ ಭರತ ನಾಟ್ಯ ಕಲಾವಿದೆ ವಿದುಷಿ ಶ್ರೀಮತಿ ಮಾನಸಿ ಸುಧೀರ್ ರವರ ಜೀವತುಂಬಿದ ಅಭಿನಯ ಮೂಲಕ ವೀಡಿಯೋ ರೂಪದಲ್ಲಿ ಯೂಟ್ಯೂಬ್ ಮುಖಾಂತರ ಫೇಸ್ ಬುಕ್ ಮತ್ತು ವಾಟ್ಸಾಪ್ ಮೂಲಕ ಬಹುತೇಕ ಎಲ್ಲರ ಮನೆ ತಲುಪಿದೆ . ಸರಿ ಸುಮಾರು ಇಪ್ಪತ್ತು ಲಕ್ಷಜನರು ವೀಕ್ಷಿಸಿರ ಬೇಕು ಎಂದು ಒಂದು ಅಂದಾಜು ತಿಳಿಸುತ್ತದೆ .ಒಂದು ಒಳ್ಳೆಯ ಗೀತೆ ಭಾವತುಂಬಿ ಹಾಡಿ ನೃತ್ಯ ರೂಪದಲ್ಲಿರಲು ಮಾತ್ರ ಈ ಥರ ಜನಮಾನಸದಲ್ಲಿ ಉಳಿದು ಪಸರಿಸುತ್ತದೆ ಅಲ್ಲವೇ ? ನನ್ನ ವಾಟ್ಸಾಪ್ ಗೇನೇ ಸುಮಾರು ಎಪ್ಪತ್ತಕ್ಕೂ ಜನರು ಇದನ್ನು ಹಂಚಿದರು.
ಅದನ್ನು ಬರೆದ ಕವಿ ಈ ಹಾಡನ್ನು ಆ ಕಾಲದಲ್ಲಿ ಸುಮಾರು ೫೦೦೦ ಜನರನ್ನು ತಲುಪಿಸಲು ಅಂದರೆ ಐವತ್ತರ ದಶಕದಲ್ಲಿ ನೂರಾರು ಮೈಲಿಗಳನ್ನು ಸೈಕಲ್ಲಿನಲ್ಲೇ ಹೋಗಿ ಹಾಡಿ ಹಂಚಿದರು. ಅವರು ಬರೆದ ಕವನ ಸಂಕಲನಗಳನ್ನು ಮಾರಲು ಅವರು ಮನೆಮನೆಗೆ ಹೋದರು .ಅದರಲ್ಲೇ ಆನಂದವನ್ನು ಕಂಡುಕೊಂಡು ತೃಪ್ತಿಪಟ್ಟರು . ಅವರು ಬರೆದುದು ಒಟ್ಟು ಎಂಟು ಪುಸ್ತಕಗಳನ್ನು .ಆವಾಗ ಪುಸ್ತಕಗಳ ರೇಟು ಎಷ್ಟು ಗೊತ್ತಾ ನಾಲ್ಕಾಣೆ ಯಿಂದ ಐವತ್ತು ಪೈಸೆ . ಹೆಚ್ಚೆಂದರೆ ಒಂದುರೂಪಾಯಿ . ಪುಸ್ತಕದ ದರ ಹೆಚ್ಚುಮಾಡುವಾಗ ತಮ್ಮ ನಿವೇದನೆಯಲ್ಲಿ ಅವರು ಈ ಸಲ ಪುಸ್ತಕಕ್ಕೆ ದರ ಹೆಚ್ಚುಮಾಡುತ್ತಿದ್ದೇನೆ ಸಹಕರಿಸಿ ಎಂದು ಹೇಳಿಕೊಂಡದ್ದುಂಟು .ಅಂತಹುದರಲ್ಲಿಯೇ ಅವರ ಪುಸ್ತಕಗಳು ಹಲವಾರು ಮುದ್ರಣಗಳನ್ನು ಕಂಡವು.ಅವರ ಒಂದು ಪುಸ್ತಕ ರಾಮಣ್ಣನ ರಗಳೆಗಳು ಅವರ ಮರಣಾನಂತರ ಪ್ರಕಟವಾಯ್ತು. ( ಸಂಪಾದಕರು .ಪ್ರೊ.ಎನ್ ಜಿ.ಪಟವರ್ಧನ್ ಉಜಿರೆ. )
ಈ ಹಾಡು ಬರೆದ ದಿ . ಬಿ ರಾಮಚಂದ್ರ ಭಟ್ ತಾಮ್ಹ ನ್ ಕರ್ ಇವರು ನನ್ನ ಖಾಸಾ ಚಿಕ್ಕಪ್ಪ.
ಬಿ ರಾಮಚಂದ್ರ ಭಟ್ಟರು ಮುಂಡಾಜೆಯ ಬತ್ರಬೈಲ್ ಎಂಬ ಮನೆಯಲ್ಲಿ ೧೪-೫-೧೯೧೪ ರಂದು ಜನಿಸಿದರು . ಇವರಿಗೆ ಐವರು ಸಹೋದರಿಯರು ಹಾಗೂ ಇನ್ನಿಬ್ಬರು ಅಣ್ಣಂದಿರು ದೊಡ್ಡಣ್ಣ ವಯಲಿನ್ ವಾದಕರು ಮಹಾದೇವ ತಾಮ್ಹನ್ ಕರ್ (ನನ್ನ ತಂದೆಯವರು ) ಹಾಗೂ ಇನ್ನೊಬ್ಬ ಅಣ್ಣ ನಾರಾಯಣ ತಾಮ್ಹನ್ ಕರ್ ಹಾರ್ಮೋನಿಯಂ ವಾದಕರು (ಇವರು ಸಂತ ಅಚ್ಚುತದಾಸರಿ ಗೆ ಸುಮಾರು ಮೂವತ್ತು ವರ್ಷಗಳ ಕಾಲ ಸಾಥ್ ಕೊಟ್ಟವರು ).
ನನ್ನ ಚಿಕ್ಕಪ್ಪನಿಗೆ ಹಾಡುಗಳನ್ನು ಬರೆಯುವ ಹುಚ್ಚು ಬಾಲ್ಯದಿಂದಲೇ ಇತ್ತು ಹಾಗೂ ಹಾಡುಗಳಿಗೆ ಸಂಗೀತ ವನ್ನು ಅಣ್ಣಂದಿರೂ ಕೊಡುತ್ತಿದ್ದುದು ಇದೆ . ಸ್ವತಃ ಹಾಡಿಕೊಂಡು ರಾಮಚಂದ್ರ ಭಟ್ಟರು ಹಾರ್ಮೋನಿಯಂ ನುಡಿಸುವುದರಲ್ಲಿಯೂ ಎತ್ತಿದ ಕೈ. ನಮ್ಮ ಮೂಲ ಮನೆಯನ್ನು ಪ್ರವೇಶಿಸಿದ ತಕ್ಷಣ ಎಡಗಡೆಯ ದೊಡ್ಡ ಕೋಣೆಯಲ್ಲಿಯೇ ಅವರು ಹಾಡುಗಳನ್ನು ಬರೆಯುತ್ತಿದು ಎಂದು ನನ್ನಲ್ಲಿ ಆಗಾಗ್ಗೆ ಹೇಳಿಕೊಂಡಿದ್ದುಂಟು. ಆವಾಗ ಈಗಿನಂತೆ ಬಾಲ್ ಪೆನ್ನು ಗಳು ಇರಲಿಲ್ಲ . ಆವಾಗ ನಿಬ್ ಇರುವ ಪೆನ್ನುಗಳ ಮೂತಿಯನ್ನು ಆಗಾಗ್ಗೆ ಶಾಯಿಯಲ್ಲಿ ಮುಳುಗಿಸುತ್ತಿರಬೇಕಿತ್ತು . ಒಮ್ಮೆ ಬರೆದರೆ ತಕ್ಷಣ ಅಳಿಸುವಂತಿಲ್ಲ . ಮೇಜಿನ ಮೇಲೆ ಶಾಯಿಯ ಬಾಟ್ಲಿ ಇಡಲು ಗುಂಡಗೆ ಕೊರೆದ ಜಾಗ ಇರುತ್ತಿತ್ತು . ಅದಕ್ಕೆ ಶಾಯಿ ದೌತಿ ಅಥವಾ ದೌತಿ ಪೀಠ ಎನ್ನುತ್ತಿದ್ದರು.
ಅವರು ಬರೆದ ಪುಸ್ತಕಗಳ ಪ್ರಕಾಶನವೂ ಮುಂಡಾಜೆಯದ್ದೇ .' ತಮ್ಮನ ಸಾಹಿತ್ಯ ಮಾಲೆ ' ಅಂದರೆ ನಮ್ಮ ಸರ್ ನೇಮ್ ತಾಮ್ಹನ್ ಕರ್ ನ ಹೃಸ್ವ ರೂಪ ಎಂಬಂತೆಯೋ ಅಥವಾ ನನ್ನ ಅಜ್ಜನವರ ಚಿಕ್ಕ ಮಗ ಅಂತಲೋ ಇಬ್ಬರು ಅಣ್ಣಂದಿರ ಪ್ರಭಾವವೋ ಏನೋ ? ಅಂತೂ 'ತಮ್ಮನ ಸಾಹಿತ್ಯಮಾಲೆ ' ಎಂಬ ಅಂದದ ಹೆಸರು ಸಾಹಿತ್ಯಕ್ಕೆ ಸೇರ್ಪಡೆ .. ಅಂದಹಾಗೆ ಮೈಸೂರಿಗೂ ಈ ಕವಿವರ್ಯರ ನಂಟು ಇದೆ.ಅವರ ಧರ್ಮಪತ್ನಿ ಅಂದರೆ ನನ್ನ ಚಿಕ್ಕಮ್ಮ ಮೈಸೂರಿನ ಅಭ್ಯಂಕರ್ ಮನೆತನದವರು. ಈಗಲೂ ಅಭ್ಯಂಕರ್ ರವರ ದೊಡ್ಡ ಮನೆ ಇದೆ .
ತಾನು ಬರೆದ ಪುಸ್ತಕಗಳ ದೊಡ್ಡ ಚೀಲವನ್ನು ಹೆಗಲಲ್ಲಿ ಹಾಕಿ ಕೊಂಡು ಅಥವಾ ಸೈಕಲ್ಲಿನಲ್ಲಿ ದಕ್ಷಿಣಕನ್ನಡದ ಹಲರು ಊರುಗಳಿಗೆ ಸೈಕಲ್ಲಿನಲ್ಲಿ ಪೆಡಲ್ ತುಳಿಯುತ್ತಾ ಪ್ರಕೃತಿಯೊಂದಿಗೆ ಚಲಿಸುತ್ತುತ್ತಿದ್ದರು .ಈ ಸಮಯದಲ್ಲಿ ನನಗೆ ಗಳಗನಾಥರು ನೆನಪಾಗುತ್ತಾರೆ .ಕನ್ನಡದ ಪುಸ್ತಕಗಳನ್ನು ಹೊತ್ತುಕೊಂಡೇ ಅಡ್ಡಾಡಿ ಪುಸ್ತಕಗಳನ್ನು ಮಾರಾಟ ಮಾಡಿ ಕನ್ನಡವನ್ನು ಬೆಳೆಸಿ ಉಳಿಸಿದ ಪುಣ್ಯಾತ್ಮರವರು.ದಿ.ರಾಮಚಂದ್ರ ಭಟ್ಟರು ಕೂಡಾ ಊರೂರುಗಳ ಶಾಲೆಗೆ ಹೋಗಿ ಒಂದೆರಡು ಹಾಡುಗಳನ್ನು ಹಾಡಿ ಅಭಿನಯಿಸಿ ಶಾಲೆಗಳಲ್ಲಿ ತಮ್ಮ ಕವನ ಪುಸ್ತಕಗಳನ್ನು ಮಾರಾಟವನ್ನು ಮಾಡುತ್ತಿದ್ದರು . ಇನ್ನೊಂದು ಮುಖ್ಯ ವಿಷಯ ಅವರು ರಿಟೈರ್ ಆದಮೇಲೆ ಕಟ್ಟಿಸಿದ ' ನವನಿಕೇತನ' ತನ್ನ ಮನೆಯಲ್ಲಿ ೧೯೭೫--೭೬ ರ ಎಮರ್ಜನ್ಸಿಯ ಆ ಹತ್ತೊಂಭತ್ತು ತಿಂಗಳಲ್ಲಿ ಅವರು ರಚಿಸಿದ್ದು ಮಕ್ಕಳ ಗೀತ ರಾಮಾಯಣ ವನ್ನು ಅವರ ಮನೆಗೆ ಹೋದಾಗ ಅವರು ಕೈ ಬರಹದಲ್ಲಿ ಬರೆದ ಪುಸ್ತಕವ ನ್ನು ನನಗೆ ತೋರಿಸಿದ್ದಾರೆ . .
ದಿ .ರಾಮಚಂದ್ರ ಭಟ್ಟರ ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದು ಆಗಾಗ್ಗೆ .ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದವರು ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳು ಮತ್ತು ಉಜಿರೆಯ ಆಗಿನ ಸರಕಾರೀ ಬೇಸಿಕ್ ಟ್ರೇನಿಂಗ ಸ್ಕೂಲ್ ನ ಹೆಡ್ ಮಾಸ್ಟರ್ ಎಂ ಶಿವರಾಮೇ ಗೌಡರು .
ಇನ್ನು ದಿ. ಕೆ ಎನ್ ಭಟ್ ಶಿರಾಡಿಪಾಲ್ , ಶಂಪಾ ದೈತೋಟ ,ದಿ.ಎಸ್ ಎ ಗೋಖಲೆ ,ಶ್ರೀ ಬಾಲಕೃಷ್ಣ ಆಠ ವಲೆ ಮುಂತಾದ ಹೆಸರಾಂತ ಲೇಖಕರು ತಮ್ಮ ಅನಿಸಿಕೆಗಳನ್ನು ಮುನ್ನುಡಿಗಳಲ್ಲಿ ಬರೆದಿದ್ದಾರೆ . ನನ್ನ ಗುರುಗಳಾದ ಶ್ರೀಯುತ ಕೇಶವ ಹೊಳ್ಳರು ಸ್ವತಃ ರಾಮಚಂದ್ರ ಭಟ್ಟರಿಂದಲೇ ಈ ಹಾಡನ್ನು ಅಭಿನಯ ಮೂಲಕ ಕಲಿತದ್ದುಂಟು ,ಕಲಿಸಿದ್ದುಂಟು . ರಾಮಚಂದ್ರ ಭಟ್ಟರು ಶಿಕ್ಷಕರಾಗಿದ್ದ ಶಾಲೆ 2021 ಕ್ಕೆ ಶತಮಾನೋತ್ಸವನ್ನು ಆಚರಿಸುತ್ತದೆ .ರಾಮಚಂದ್ರ ಭಟ್ಟರು ಬರೆದ ಸುಮಾರು ಮುನ್ನೂರು ಗೀತೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಹಾಡುಗಳನ್ನು ಅಭಿನಯದ ಮೂಲಕ ಮಕ್ಕಳಿಗೆ ಕಲಿಸಬಹುದು . ಇದರ ಕೆಲಸ ಆಗಬೇಕಾಗಿದೆ . ಮಕ್ಕಳ ಮನೋಭಾವವನ್ನು ಸೂಕ್ಮವಾಗಿ ಅರಿತು ಅವರ ರುಚಿಗೆ ತಕ್ಕಂತಹ ಹಾಡುಗಳನ್ನು ಬರೆದು ಮಕ್ಕಳಿಗೆ ಹೇಳಿಕೊಡುತ್ತಿದ್ದುದು ಅವರ ಅಂದುಸಾಹಸವೇ ಸೈ .
ಈಗಿನ ಆನ್ ಲೈನ್ ಶಿಕ್ಷಣದಿಂದಾಗಿ ಮಕ್ಕಳು ಕಣ್ಣಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಬೆಂಗಳೂರಿನ ಮಿಂಟೋ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದಾರೆ ಎಂದು ಪತ್ರಿಕೆಗಳಲ್ಲಿ ಇವತ್ತು ಓದಿದ್ದೇನೆ . ಕಣ್ಣಿನ ತೊಂದರೆ ಎದುರಿಸುತ್ತಿರುವ ಮಕ್ಕಳು ಶೇಕಡಾ ೩೦ ರಷ್ಟು ಹೆಚ್ಚಾಗಿದ್ದಾರಂತೆ . ಮಕ್ಕಳಿಗೆ ಗಿಡ ಮರಗಳನ್ನು ತೋರಿಸುತ್ತ ಹಸಿರು ಪರಿಸರದಲ್ಲಿ ಕಲಿತರೆ ಈ ಸಮಸ್ಯೆಯನ್ನು ಹೋಗಲಾಡಿಸಬಹುದಂತೆ . ಈ ನಿಟ್ಟಿನಲ್ಲಿ ಕಾರಂತರು ಮತ್ತು ಶ್ರೀ ಚಂದ್ರ ಶೇಖರ ದಾಮ್ಲೆಯವರ ಪ್ರಯೋಗಗಳು ನೆನಪಾಗುತ್ತವೆ . . ದಿ.ರಾಮಚಂದ್ರ ಭಟ್ಟರ ಹಾಡುಗಳನ್ನು ಓದುತ್ತ ಹಾಡುತ್ತ ಕುಣಿಯುತ್ತ ಕಲಿಸಿದರೆ ಈಗಿನ ' ನಲಿ ಕಲಿ ' ಪ್ರಯೋಗಕ್ಕೆ ನೂರಾರು ಹಾಡುಗಳನ್ನು ಅಳವಡಿಸಬಹುದು . ಯಾರಾದರೂ ಮುಂದೆ ಬಂದು ಇದನ್ನು ಮಾಡ ಬೇಕಷ್ಟೆ . ರಾಮಚಂದ್ರ ಭಟ್ಟರ ಹಾಡಿನ ಪುಸ್ತಕಗಳಲ್ಲಿ ಇದಕ್ಕೆ ಬೇಕಾದ ಸರಕುಗಳು ಇವೆ . ಐದನೆಯ ತರಗತಿಯ ವರೆಗೆಗೆ ಬೇಕಾದ ಎಲ್ಲ ನಮೂನೆಯ ಪಾಠ ಗಳಿಗೆ ಬೇಕಾಗುವಂತಹ ಹಾಡುಗಳು ಇಲ್ಲಿವೆ .ಮಕ್ಕಳಿಗೆ ಪಾಠ ಮಾಡಬೇಕಾಗಿರುವುದು ಗುರುಕುಲಗಳಲ್ಲಿ .ಎದುರು ಬದುರು ಕುಳಿತೇ ಅಲ್ಲವೇ.
ಮೈಸೂರು ಆಕಾಶವಾಣಿಯಲ್ಲಿ ಇವರು ಬರೆದ ಮಕ್ಕಳಿಗೆ ಕಲಿಸಿದಹಾಡು " ದುಡಿಯೋಣ ಬಾರಣ್ಣ ದುಡಿಯೋಣ ಬಾ ಬಾ ಎತ್ತನು ಪಡೆದು ನೇಗಿಲ ಪಿಡಿದು " ಹಾಡು ೧೯೫೫ ನೇ ಇಸವಿಯ ಅಗೋಸ್ತು ಹದಿನೈದು ಸ್ವತಂತ್ರ ದಿನಾಚರಣೆಯ ದಿನದಂದು ಬಿತ್ತರಗೊಂಡಿತು. ಇಡೀ ರಾಜ್ಯದ ಮಕ್ಕಳು ಮತ್ತು ಶ್ರೋತೃಗಳು ಇದನ್ನು ಆಹ್ಲಾದಿಸಿದರು. ಈ ಹಾಡು ಈಗ ತುಂಬಾ ಪ್ರಸ್ತುತ . ಭಾರತವು ಕೃಷಿ ಪ್ರಧಾನ ವಾದ ದೇಶ . ಕೃಷಿಯನ್ನು ಅಲಕ್ಷಿಸಬಾರದು ಎಂದು ಅಂದೇ ಮಕ್ಕಳಿಗೆ ಹೇಳಿದ ಮಹಾನುಭಾವರು ಅವರು .
ಅವರ ಹಾಡುಗಳನ್ನು ಜನರಿಗೆ ತಲುಪಿಸುವಲ್ಲಿ ಅಂದಿನ ಶಿಕ್ಷಣ ವೃಂದ ದಷ್ಟೆಯೇ ಈಗಿನ ಪ್ರಸಿದ್ಧ ಅಂಕಣಕಾರರಾದ .ಶ್ರೀ ಶ್ರೀವತ್ಸ ಜೋಶಿ ಯವರು ( ಅಮೆರಿಕಾ ನಿವಾಸಿ ) ತಮ್ಮ ಹಲವಾರು ಅಂಕಣಗಳನ್ನು ಈ ಕವಿಗಾಗಿಯೇ ಮೀಸಲು ಆಗಾಗ್ಗೆ ಇಡುತ್ತಿದ್ದಾರೆ , ಶ್ರೀ ಚಿದಂಬರ ಕಾಕತ್ ಕರ್ ರವರು (ಈಗ ಮಂಗಳೂರು ನಿವಾಸಿ ) ಭಟ್ಟರ ಹಾಡುಗಳು ಚಂದಮಾಮ ಮಾಸ ಪತ್ರಿಕೆ ಬೆಳಕು ಕಂಡದ್ದನ್ನು ತಿಳಿಸಿದ್ದುಂಟು , ನಾನು ಎರಡು ವರ್ಷ ಗಳಹಿಂದೆ ಪ್ರಜಾವಾಣಿ ಪತ್ರಿಕೆಗೆ ಈ ಕವಿಯು ಬರೆದ ' ಗೆಳೆಯನೆ ಪೇಳುವೆ ಕೇಳಣ್ಣ ರೈಲು ಪ್ರವಾಸದ ಕನಸನ್ನ ' ಹಾಡನ್ನು ಕಳಿಸಿ ಪ್ರಚುರ ಗೊಳ್ಳಲು ಕಾರಣನಾದೆ .ಡಾ.ಗೋಪಾಲ್ ಮರಾಠೆ ಎಂಬವರು ತಮ್ಮ ವೇದ ಶಿಬಿರಗಳಿಗೆ ಪ್ರಾರ್ಥನಾ ಗೀತೆಯಾಗಿ 'ವಿಶ್ವ ಕರ್ತನೆ ವಿಶ್ವ ಪಾಲನೆ ವಿಶ್ವ ವಂದ್ಯನೆ ' ಹಾಡನ್ನು ಕಲಿಸುತ್ತಾರೆ. ( ಮರಾಠೇ ಯವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಯೋ ಕೆಮೆಸ್ಟ್ರಿ ಮತ್ತು ಜೀವರಸಾಯನ ಶಾಸ್ತ್ರ ವಿಭಾಗಗಳ ಮುಖ್ಯಸ್ಥರು ) ಶ್ರೀಯುತ ಬೊಳುವಾರರ ತಟ್ಟು ಚಪ್ಪಾಳೆ ಪುಟ್ಟ ಮಗು ಕವನ ಸಂಕಲನದಲ್ಲಿ ಭಟ್ಟರ ಒಂದು ಗೀತೆ ಇದೆ .ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರೊ. ಎನ್ ಜಿ ಪಟವರ್ಧನ್ ರವರು ತನ್ನ ಗುರುಗಳ ಎಲ್ಲ ಹಾಡುಗಳನ್ನು ಒಂದುಗಡೆ ಕೂಡಿಸಿ ಸಂಪಾದಿಸಿದರು .
ಹಾಡಿನ ಕೊಂಡಿ ಈ ಕೆಳಗೆ ಇದೆ .
https://youtu.be/czdRtNOCPHw ಲೇಖನದ ಜೊತೆ ಅಕ್ಷರಮಾಲೆಯ ಗಣಪತಿಯ ಹಾಡು ಮೂಲ ಪುಸ್ತಕದ ಪುಠ ದಲ್ಲಿ ಇದ್ದದ್ದನ್ನು ಓದಿರಿ. ( ತಮ್ಮನ ಕವಿತೆಗಳು ಪುಸ್ತಕದ 25 ನೇ ಪುಟ ) ಮತ್ತು ರಾಮಚಂದ್ರ ಭಟ್ಟರ ಇಳಿ ವಯಸ್ಸಿನಲ್ಲಿಯ ಅಕ್ಷರ ಗಳನ್ನು ನೋಡಿ ಓದಿ, ರಾಮಣ್ಣನ ರಗಳೆಗಳಿಂದ ಆಯ್ದದ್ದು ಓದಿರಿ.ದಿ ರಾಮಚಂದ್ರ ಭಟ್ಟರ ಸಮಗ್ರ ಕೃತಿಗಳು ಪುಸ್ತಕದ ಬೆನ್ನುಡಿ ಇದು.
ಇಂತು ನಿಮ್ಮ : ರಘುಪತಿ ತಾಮ್ಹನ್ ಕರ್ ಮೈಸೂರು.
.....
Ramesh Bhat Belagodu, Indira Hegde and 525 others
341 Comments
165 Shares
Like
Comment
Share

No comments:

Post a Comment